ಜ್ಞಾನಾರ್ಜನೆಗೆ ನಿತ್ಯ ಪತ್ರಿಕೆ ಓದಿ: ಅಶೋಕಕುಮಾರ ಕರಂಜಿ

ಬೀದರ್:ಜು.23: ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ನಿತ್ಯ ಪತ್ರಿಕೆಗಳನ್ನು ಓದಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಹೇಳಿದರು.
ಜೀಜಾಮಾತಾ ಶಿಕ್ಷಣ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕ, ತಾಲ್ಲೂಕು ಮಹಿಳಾ ಘಟಕ ಹಾಗೂ ಬೀದರ್ ಉತ್ತರ ಘಟಕದ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆ ಓದುವುದರಿಂದ ಪ್ರಚಲಿತ ವಿದ್ಯಮಾನಗಳ ಮಾಹಿತಿ ದೊರಕುತ್ತದೆ. ಸಾಮಾನ್ಯ ಜ್ಞಾನ ವೃದ್ಧಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡಿಕೊಳ್ಳಲು ಸಹ ನೆರವಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಗುರುತಿಸಿಕೊಂಡಿದೆ. ದೇಶದ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಂಗಳೂರು ಸಮಾಚಾರ 1856 ರಲ್ಲಿ ರಾಜ್ಯದಲ್ಲಿ ಆರಂಭವಾದ ಮೊದಲ ದಿನಪತ್ರಿಕೆಯಾಗಿದೆ ಎಂದು ತಿಳಿಸಿದರು.
ಮೊದಲು ಪತ್ರಿಕೆ ಓದುಗರ ಸಂಖ್ಯೆ ಕಡಿಮೆ ಇತ್ತು. ಜನರಲ್ಲಿ ಜಾಗೃತಿ ಉಂಟಾದ ಮೇಲೆ ಸಂಖ್ಯೆ ಹೆಚ್ಚಿತು ಎಂದರು.
ಪತ್ರಿಕೆಗಳು ಇಂದಿಗೂ ಸಾಮಾಜಿಕ ಬದ್ಧತೆಯನ್ನು ಕಾಯ್ದುಕೊಂಡು ಬಂದಿವೆ. ಶೋಷಿತರು, ಅಸಹಾಯಕರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು
ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಗಂಧರ್ವ ಸೇನಾ ಅವರು, ಆರಂಭದ ದಿನಗಳಿಗೆ ಹೋಲಿಸಿದರೆ ಪತ್ರಿಕಾ ರಂಗದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಪತ್ರಿಕಾ ರಂಗದಲ್ಲೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಕ್ಷಣಾರ್ಧದಲ್ಲೇ ಸುದ್ದಿ ಎಲ್ಲೆಡೆ ತಲುಪುತ್ತಿವೆ ಎಂದು ಹೇಳಿದರು.
.ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಮಾತನಾಡಿ, ಸಾಮಾಜಿಕ ಬದಲಾವಣೆ ಹಾಗೂ ದೇಶದ ಪ್ರಗತಿಗೆ ಪತ್ರಿಕೆಗಳು ತನ್ನದೇ ಆದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಪತ್ರಕರ್ತರನ್ನು ಸನ್ಮಾನಿಸಲಾಯಿತು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದೀಪಕ ಮನ್ನಳ್ಳಿ, ಪೂಜಾ ಪಿಟಲೆ, ಪ್ರಿಯಾ ಪಿಟಲೆ, ಜಾರ್ಜ್ ಫನಾರ್ಂಡೀಸ್, ಎಂ.ಪಿ. ಮುದಾಳೆ, ಅಶೋಕ ಡಿ, ನಾಗಶೆಟ್ಟಿ ಧರಂಪುರ, ಚಂದ್ರಯ್ಯ ಸ್ವಾಮಿ, ಸಂತೋಷ ಸಿ, ಅಲಿಮೊದ್ದಿನ್, ಶರತ್ ಘಂಟೆ, ಎಂ.ಎಸ್. ಘಂಟಿ, ಆನಂದ್ ಕೆ. ಜಾಧವ್, ಸಂತೋಷ ಮಂಗಳೂರೆ, ಸಿದ್ಧಾರೂಢ ಭಾಲ್ಕೆ, ರಾಜಕುಮಾರ ಗಾದಗೆ, ಅನಿಲಕುಮಾರ ಟೆಕೋಳೆ, ಸಂಜಯ್ ಪಾಟೀಲ, ಮೋಹನ್ ಜೋಶಿ ಇದ್ದರು.
ತಾನಾಜಿ ನಿರಗುಡೆ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ವಂದಿಸಿದರು.