ಜ್ಞಾನಸುಧಾ ವಿದ್ಯಾಲಯದಲ್ಲಿ ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಬೀದರ್: ಮೇ.10:ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಅಭಿನಂಧಿಸಲಾಯಿತು.

ನಗರದ ಮಾಮನಕೇರಾದಲ್ಲಿ ಇರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ಸಾಧಕ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿ ಮಾತನಾಡಿ ಅವರು, ‘ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಪಡೆಯಲು ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಆದರೆ ಬೇರೆ ಜಿಲ್ಲೆಗಳಿಗೆ ಹೋದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಅಭ್ಯಾಸ ಮಾಡುವುದಕ್ಕೆ ಬಹಳ ಕಷ್ಟವಾಗಬಹುದು. ಈ ಕಷ್ಟವನ್ನು ಅನೇಕ ವಿದ್ಯಾರ್ಥಿಗಳು ಈಗಾಗಲೇ ಎದುರಿಸುತ್ತಿದ್ದಾರೆ. ಹೀಗಾಗಿ ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ಹೋಗಬಾರದು. ಸರಿಯಾದ ವಾತಾವರಣದಲ್ಲಿ ಇರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಾಲಕರೂ ಸಹ ಇದನ್ನು ಗಮನಿಸಬೇಕು. ನಮ್ಮ ಮಕ್ಕಳು ನಮ್ಮ ಹತ್ತಿರನೇ ಇದ್ದಾಗ ಮಾತ್ರ ಅವರ ಪ್ರತಿಯೊಂದು ನಡವಳಿಕೆಯನ್ನು ಗಮನಿಸಲು ನಮಗೆ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬೇಕಾದ ಸಲಹೆ ಸಹಾಯವನ್ನು ಪಾಲಕರು ಮತ್ತು ಶಿಕ್ಷಕರಿಂದ ಪಡೆದು ಕಠಿಣ ಪರಿಶ್ರಮದೊಂದಿಗೆ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಜ್ಞಾನಸುಧಾ ವಿದ್ಯಾಲಯದ ನಿರ್ದೇಶರಾಕದ ಡಾ. ಮುನೇಶ್ವರ ಲಾಖಾ ಅವರು ಮಾತನಾಡಿ, ‘ಪಾಲಕರು ತಮ್ಮ ಮಕ್ಕಳಿಗೆ ಪ್ರತಿದಿನ ಶಾಲೆಗೆ ಕಳುಹಿಸಿಕೊಟ್ಟಾಗ ಮಾತ್ರ ಅವರಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನುರಿತ ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಫಲವಾಗಿ ಈ ವರ್ಷದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ದೇಶಕ್ಕೆ 31ನೇ ರ್ಯಾಂಕ್ ಪಡೆದಿದ್ದಾನೆ. ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಸಹ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನೀಡಲಾಗುತ್ತಿರುವ ಗುಣಮಟ್ಟ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಪ್ರೇಮಕುಮಾರ ಚಂದ್ರಶೇಖರ ಹಾಗೂ ಭಾಗ್ಯಶ್ರೀ ಜಗನಾಥ ಅವರು ತನ್ನ ಅಭಿಪ್ರಾಯ ಹಂಚಿಕೊಂಡು, ‘ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಏಕೈಕ ಟಿಪ್ಸ್ ಅಂದರೆ ಮೊದಲು ಒಂದು ದಿನ ತಪ್ಪದೆ ಶಾಲೆಗೆ ಹಾಜರಾಗುವುದು. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಗಮನಕೊಟ್ಟು ಆಲಿಸಿ ಅಂದು ಹೇಳಿಕೊಟ್ಟ ಪಾಠವನ್ನು ಅಂದೇ ಓದಿ ಅರ್ಥೈಸಿಕೊಳ್ಳಬೇಕು’ ಎಂದು ತಿಳಿಸಿದರು.

ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ, ವಸಿಮಾ, ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಜಾತಾ ಬೊಮ್ಮಾರಡ್ಡಿ ಉಪಸ್ಥಿತರಿದ್ದರು.