ಜ್ಞಾನಶಕ್ತಿ ವೃದ್ಧಿಯಿಂದ ಉತ್ತಮ ಬದುಕು

ವಿಜಯಪುರ, ಸೆ. ೧೩:ವಿದ್ಯಾರ್ಥಿಜೀವನ ಅತಿಮುಖ್ಯ ಮತ್ತು ಅಮೂಲ್ಯವಾದುದು, ಜ್ಞಾನದ ಗಳಿಕೆಯು ವಿದ್ಯಾರ್ಥಿದಿಸೆಯಲ್ಲಿ ಕಡ್ಡಾಯವಾಗಿ ಆಗಬೇಕು. ಗುರುವಾದವರು ಶಿಷ್ಯರಿಗೆ ಮಾಡುವ ಬೋಧನೆಯು ಕೇವಲ ಬುದ್ಧಿಮಾತು ಹೇಳುವ, ಉಪನ್ಯಾಸ ನೀಡುವುದಕ್ಕಿಂತ ಉಪದೇಶ ಮಾಡುವುದು ಶ್ರೇಷ್ಟವಾದುದು ಎಂದು ಮಳ್ಳೂರಿನ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ಪೂರ್ಣಾನಂದ ತಿಳಿಸಿದರು.
ಪಟ್ಟಣದ ಅಶೋಕನಗರದ ೩ ನೇ ಕ್ರಾಸ್‌ನಲ್ಲಿರುವ ಬಾಲಗೋಕುಲ ನಿವಾಸದಲ್ಲಿ ಸದ್ಗುರು ಶ್ರೀ ಸುಬ್ಬರಾಯಶರ್ಮ ಸತ್ಸಂಗ ಸೇವಾಸಮಿತಿ, ಬಾಲಗೋಕುಲಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ, ಗುರುಪೂರ್ಣಿಮೆ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಉತ್ತಮ ಸಾಂಗತ್ಯದಿಂದ ಬದುಕಿಗೆ ಬೇಕಾಗುವ ಅಮೂಲ್ಯವಾದ ವಿಷಯಗಳು ದೊರೆಯುತ್ತವೆ. ಮಕ್ಕಳಿಗೆ ಇಂದು ಲೌಕಿಕ ಶಿಕ್ಷಣದೊಂದಿಗೆ ಅಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ಕಲಿತಿದ್ದನ್ನು ಧಾರಣೆ ಮಾಡಿಕೊಳ್ಳುವುದು ಆಗಬೇಕು. ಉತ್ತಮ ಆಲೋಚನೆಗಳಿಂದ ಶ್ರೇಷ್ಟ ಬದುಕು ಸಾಧ್ಯ. ಸಜ್ಜನರ ಸಂಗದಿಂದ ಸತ್ಸಂಗಗಳನ್ನು ಬಳಸಿಕೊಳ್ಳುವ ಮೂಲಕ ಜ್ಞಾನ ಪ್ರಾಪ್ತಿ ಮಾಡಿಕೊಳ್ಳಬೇಕು.ಮಕ್ಕಳ ದಿಸೆಯಲ್ಲಿ ಬಾಲಸಾಧಕರ ಕತೆಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದರು.
ಬಾಲಗೋಕುಲದ ಬೋಧಕ ಎಂ.ಕೃಷ್ಣಪ್ಪದಾಸ ಮಾತನಾಡಿ, ಭಗವದ್ಗೀತೆಯು ಜೀವನಧರ್ಮಯೋಗವಾಗಿದೆ, ಭಗವದ್ಗೀತೆಯನ್ನು ಓದುವುದಕ್ಕಿಂತ ಅಧ್ಯಯನ ಮಾಡಬೇಕು. ಗೀತೆಯ ಅಧ್ಯಯನದಿಂದ ಜೀವನವನ್ನು ಧರ್ಮಬದ್ಧವಾಗಿ ಸುಗಮವಾಗಿ ಸಾಗಿಸಬಹುದಾಗಿದೆ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲೋಕೇಶಣ್ಣ, ಧಾರ್ಮಿಕ ಚಿಂತಕ ನೆಲಮಂಗಲ ನಾಗರಾಜು, ಕವಿ ಮ.ಸುರೇಶ್‌ಬಾಬು ಮಾತನಾಡಿದರು, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಶಿಕ್ಷಕಿ ಎಂ.ಗಿರಿಜಾಂಬ, ಧಾರ್ಮಿಕ ಚಿಂತಕಿ ಲಲಿತಮ್ಮ, ಸಂತೋಷ್, ವಿ.ಎನ್.ವೆಂಕಟೇಶ್, ಮತ್ತಿತರರು ಇದ್ದರು. ಭಗವದ್‌ಗೀತಾ ಪ್ರವಚನ ನಡೆಯಿತು.