ಜ್ಞಾನವೇ ನಿಜವಾದ ಸಂಪತ್ತು

ಸಾಣೇಹಳ್ಳಿ.ನ.೪; ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸಾನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಜಗತ್ತಿನ ಜನರು ಭೂಮಿ, ಬಂಗಾರ ಮತ್ತು ಸ್ತ್ರೀ ಈ ಮೂರೂ ನಿಜವಾದ ಸಂಪತ್ತುಗಳೆಂದು ಭ್ರಮಿಸಿ ಅವುಗಳನ್ನು ಪಡೆಯಲು ಏನೆಲ್ಲ ಹೋರಾಟ ಮಾಡುವರು. ಆದರೆ ಪ್ರಭುದೇವರು ಹೇಳುವುದು ಇವು ಸಂಪತ್ತುಗಳಲ್ಲ; ಜ್ಞಾನವೇ ನಿಜವಾದ ಸಂಪತ್ತು. ಅಂಥ ಜ್ಞಾನವನ್ನು ಪಡೆದುಕೊಂಡರೆ ನಿನಗಿಂತ ಶ್ರೀಮಂತರು ಮತ್ತೊಬ್ಬರಿಲ್ಲ ಎಂದು ಸ್ಪಷ್ಟಪಡಿಸುವರು. ಕೊರೊನಾ ಅವಧಿಯಲ್ಲಾದರೂ ಈ ಸತ್ಯವನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಜ್ಞಾನವನ್ನು ಪಡೆಯಲು ಹಲವು ಮಾರ್ಗಗಳಿವೆ. ಪ್ರಮುಖವಾಗಿ ಸಾಂಪ್ರದಾಯಿಕ ಶಿಕ್ಷಣ ಮತ್ತು ವ್ಯಾವಹಾರಿಕ ಶಿಕ್ಷಣ ಇಲ್ಲವೇ ಓಪಚಾರಿಕ ಶಿಕ್ಷಣ, ಅನೌಪಚಾರಿಕ ಶಿಕ್ಷಣ ಪ್ರಮುಖವಾದವು. ಶಾಲಾ ಕಾಲೇಜುಗಳಿಗೆ ಹೋಗಿ ಪಠ್ಯಾಧಾರಿತ ಶಿಕ್ಷಣದ ಮೂಲಕ ಪರೀಕ್ಷೆ ಬರೆದು ಪದವಿ ಪಡೆಯುವುದು ಸಾಂಪ್ರದಾಯಿಕ ಶಿಕ್ಷಣ. ಶಾಲಾ ಕಾಲೇಜಿಗೆ ಹೋಗದಿದ್ದರೂ ನೋಡುವ, ಮಾಡುವ, ಕೇಳುವ, ಅನುಭವಿಸುವ ಮೂಲಕ ಪಡೆಯುವುದು ಅನೌಪಚಾರಿಕ ಅಥವಾ ವ್ಯಾವಹಾರಿಕ ಶಿಕ್ಷಣ. ಇಂಥ ಶಿಕ್ಷಣ ನೀಡುವಲ್ಲಿ ಬಹುದೊಡ್ಡ ಸ್ಥಾನ ರಂಗಭೂಮಿಗೆ ಇದೆ.ಕನ್ನಡ ರಂಗಭೂಮಿಯಲ್ಲಿ ಹಿಂದೆ ಕಂಪನಿ ನಾಟಕಗಳು ಹೆಚ್ಚಾಗಿದ್ದವು. ಉದಾಹರಣೆಗೆ ಗುಬ್ಬಿವೀರಣ್ಣ, ಹಲಗೇರಿ ಜಟ್ಯಪ್ಪ, ಗುಡಿಗೇರಿ ಬಸವರಾಜ, ಏಣಗಿ ಬಾಳಪ್ಪ ಇತ್ಯಾದಿ ಕಂಪನಿಗಳು. ಅವರ ಉದ್ದೇಶ ಜನರನ್ನು ರಂಜಿಸಿ ಅವರಿಗೆ ಪುರಾಣ ಪುಣ್ಯಪುರುಷರ ಕತೆಗಳನ್ನು ಹೇಳುವುದಾಗಿತ್ತು. ಬೆಂಗಳೂರಿಗೆ ಪಾರ್ಶಿ ನಾಟಕ ಬಂದಾಗ ಅದನ್ನು ನೋಡಿದ ಮೈಸೂರಿನ ಮಹಾರಾಜರು ಇಂಥ ನಾಟಕಗಳನ್ನು ನಮ್ಮಲ್ಲೂ ಮಾಡಬಹುದೆಂದು ಅರಮನೆಯಲ್ಲಿ ತಂಡವನ್ನೇ ಕಟ್ಟುವರು. ನಾಟಕ ಬರೆಯಲಿಕ್ಕಾಗಿಯೇ ಕೆಲವರನ್ನು ಆಯ್ಕೆ ಮಾಡಿಕೊಳ್ಳುವರು. ಪಾರ್ಶಿರಂಗಭೂಮಿಗೆ ತಕ್ಕ ರಂಗಮಂಚ ಮತ್ತು ಬಣ್ಣದ ಪರದೆ, ವೇಷಭೂಷಣಗಳನ್ನು ಬಳಸಲು ಪ್ರಾರಂಭಿಸಿದರು. ಮಡಿವಂತಿಕೆಯಿಂದ ಕೂಡಿದ ರಂಗಭೂಮಿಯ ಚಟುವಟಿಕೆಗಳಲ್ಲಿ ವಿದ್ಯಾವಂತರ ಪ್ರವೇಶಕ್ಕೆ ಕಾರಣವಾಗಿದ್ದು ೧೯೫೯ರಲ್ಲಿ ಪ್ರಾರಂಭವಾದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಇಲಾಖೆ. ಅದರ ಅಡಿಯಲ್ಲಿ ಬೆಂಗಳೂರು, ಆಂದ್ರ, ಕೇರಳ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಶಾಖೆಗಳಿವೆ. ಈ ಮೂಲಕ ನಾಟಕಗಳ ಮೂಲಕ ಜನರಿಗೆ ಶಿಕ್ಷಣ ನೀಡಿ ಅವರಲ್ಲಿ ನೈತಿಕ, ಸಾಮಾಜಿಕ ಜಾಗೃತಿ ಮೂಡಿಸುವ ಜವಾಬ್ದಾರಿ ಸರ್ಕಾರಕ್ಕೆ ಬಂತು. ಎನ್ ಎಸ್ ಡಿ ಪ್ರಭಾವದಿಂದಾಗಿ ನಾಟಕಗಳಿಗೆ ವಿಶೇಷ ಮೆರಗು ಬರುವಂತಾಯ್ತು. ಅದು ಅನೌಪಚಾರಿಕ ಶಿಕ್ಷಣ ನೀಡುವ ಕೆಲಸವನ್ನೂ ಮಾಡಲಾರಂಭಿಸಿತು. ಬೇರೆ ಬೇರೆ ಭಾಷೆ ಬಲ್ಲ ವಿದ್ಯಾವಂತರೇ ದೆಹಲಿ ಮತ್ತಿತರ ರಂಗಶಾಲೆಗಳಿಗೆ ಸೇರಿ ತರಬೇತಿ ಪಡೆಯಲಾರಂಭಿಸಿದರು. ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ ಜ್ಯೋತಿ, ಕೆ ದಾಕ್ಷಾಯಣಿ ಮತ್ತು ಹೆಚ್ ಎಸ್ ನಾಗರಾಜ್ ಸುಶ್ರಾವ್ಯವಾಗಿ ವಚನಗೀತೆ, ಭಾವಗೀತೆ ಮತ್ತು ರಂಗಗೀತೆಗಳನ್ನು ಹಾಡಿದರು. ಸಿ ಕೆ ಸ್ವಾಮಿ ಸ್ವಾಗತಿಸಿದರು. ದೇಶ-ವಿದೇಶದ ಸಾವಿರಾರು ಜನ ಅಂತರ್ಜಾಲಿಗರು ಕಾರ್ಯಕ್ರಮವನ್ನು ವೀಕ್ಷಿಸಿದರು.