ಜ್ಞಾನವಾಪಿ ಸಮೀಕ್ಷೆ ಗಡುವು ಅಂತ್ಯ

ನವದೆಹಲಿ, ನ. ೨೮- ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ವರದಿಯ ಗಡುವು ಇಂದು ಅಂತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಇಂದು ಸಂಜೆಯೊಳಗೆ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.
೧೦೦ ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಎಎಸ್‌ಐ ಹಲವು ಬಾರಿ ವಿಸ್ತರಿಸುವಂತೆ ಮನವಿ ಮಾಡಿತ್ತು. ಇದೀಗ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಸಮೀಕ್ಷೆಯು ಸುಮಾರು ಒಂದು ತಿಂಗಳ ಹಿಂದೆ ಮುಕ್ತಾಯಗೊಂಡಿತು ಮತ್ತು ಎಎಸ್‌ಐ ತನ್ನ ವರದಿ ಸಲ್ಲಿಸಲು ಹೆಚ್ಚುವರಿ ಸಮಯವನ್ನು ಕೋರಿತ್ತು. ಕೊನೆಯದಾಗಿ ನವೆಂಬರ್ ೧೮ ರಂದು ಎಎಸ್‌ಐ ಇನ್ನೂ ೧೫ ದಿನಗಳ ಕಾಲಾವಕಾಶ ಕೇಳಿದಾಗ ವಿಸ್ತರಿಸಲಾಗಿತ್ತು. ನ್ಯಾಯಾಲಯ ೧೦ ದಿನಗಳ ಕಾಲಾವಕಾಶ ನೀಡಿತ್ತು.
ಮಸೀದಿ ಆವರಣದಲ್ಲಿ ಆಗಸ್ಟ್ ೪ರಿಂದ ಎಎಸ್ ಐ ಸರ್ವೆ ನಡೆಸಿತ್ತುಇದು ವುಜುಖಾನಾ ಪ್ರದೇಶವನ್ನು ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಸಮೀಕ್ಷೆ ನಡೆಸಲಾಗಿಲ್ಲ.
ನವೆಂಬರ್ ೨ ರಂದು, ಎಎಸ್‌ಐ ಸಮೀಕ್ಷೆ “ಪೂರ್ಣಗೊಳಿಸಿದೆ” ಆದರೆ ಸಮೀಕ್ಷೆಯಲ್ಲಿ ಬಳಸಲಾದ ಸಲಕರಣೆಗಳ ವಿವರಗಳೊಂದಿಗೆ ವರದಿ ಸಂಗ್ರಹಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು ದಾಖಲೆ ಸಲ್ಲಿಸಲು ನ್ಯಾಯಾಲಯ ನವೆಂಬರ್ ೧೭ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿತ್ತು.
ದೇವಾಲಯದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ನಾಲ್ವರು ಮಹಿಳೆಯರು ಸಲ್ಲಿಸಿದ ಅರ್ಜಿಯ ನಂತರ ಜುಲೈ ೨೧ ರಂದು ವಾರಣಾಸಿ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ನ್ಯಾಯಾಲಯ ಆ ಅರ್ಜಿಯನ್ನು ಆಧರಿಸಿ ಸಂಕೀರ್ಣದ ವೀಡಿಯೊ ಸಮೀಕ್ಷೆಗೆ ಆದೇಶಿಸಿತು. ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯು ವುಝುಖಾನಾದಲ್ಲಿನ ರಚನೆಯನ್ನು ಬಹಿರಂಗಪಡಿಸಿತು, ಅರ್ಜಿದಾರರು ’ಶಿವಲಿಂಗ’ ಇದೆ ಎಂದು ಪ್ರತಿಪಾದಿಸಿದ್ದರು.
ಬಲಪಂಥೀಯ ಕಾರ್ಯಕರ್ತರು ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ೧೭ ನೇ ಶತಮಾನದಲ್ಲಿ ಕೆಡವಲಾಯಿತು ಎಂದು ಹೇಳಿಕೊಳ್ಳುತ್ತಾರೆ. ಈ ಮಸೀದಿ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ.