ಜ್ಞಾನವಾಪಿ ಸಮೀಕ್ಷೆಗೆ ೪ ವಾರ ಅವಕಾಸ

ಲಕ್ನೋ, ಸೆ.೯-ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ವಾರಣಾಸಿ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಮಸೀದಿ ಆಡಳಿತ ಸಮಿತಿಯ ಆಕ್ಷೇಪವನ್ನು ವಜಾಗೊಳಿಸಿದ್ದಾರೆ. ಎಎಸ್‌ಐಗೆ ಹೆಚ್ಚುವರಿ ಸಮಯವನ್ನು ನೀಡಿದ್ದಾರೆ ಎಂದು ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ತಿಳಿಸಿದರು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಎಎಸ್‌ಐ ಪ್ರಸ್ತುತ ನಡೆಸುತ್ತಿದೆ. ಈ ಸಮೀಕ್ಷೆಯ ಉದ್ದೇಶವು ೧೭ ನೇ ಶತಮಾನದಷ್ಟು ಹಿಂದಿನದಾದ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯವಾಗಿರಬಹುದಾದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸುವುದು.ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು.
ವಾರಣಾಸಿ ಜಿಲ್ಲಾ ನ್ಯಾಯಾಲಯದ ಹಿಂದಿನ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ, ನ್ಯಾಯದ ಹಿತದೃಷ್ಟಿಯಿಂದ ಸಮೀಕ್ಷೆ ಅಗತ್ಯ ಎಂದು ಹೇಳಿದೆ. ನಿವೇಶನ ವಿವಾದದಲ್ಲಿ ಭಾಗಿಯಾಗಿರುವ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರಿಗೂ ಸಮೀಕ್ಷೆಯಿಂದ ಅನುಕೂಲವಾಗಲಿದೆ ಎಂಬ ನಂಬಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.