ಜ್ಞಾನವಾಪಿ ಮಸೀದಿ ಸಮೀಕ್ಷೆ ಅಂತ್ಯ

ವಾರಣಾಸಿ(ಉತ್ತರ ಪ್ರದೇಶ).ಮೇ ೧೪- ಜ್ಞಾನವಾಪಿ ಶೃಂಗಾರ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಬೆಳಿಗ್ಗೆಯಿಂದಲೇ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವಾರಣ ನಿರ್ಮಾಣವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯ ಹೆಚ್ಚುವರಿಯಾಗಿ ಇಬ್ಬರು ಆಯುಕ್ತರನ್ನು ನೇಮಿಸಿದೆ. ನ್ಯಾಯಾಲಯ ನಿಯೋಜಿಸಿರುವ ಆಯುಕ್ತರೊಂದಿಗೆ ಸಮೀಕ್ಷೆಯ ಪ್ರಕ್ರಿಯೆ ಅಂತ್ಯಗೊಂಡಿತು.
ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಕೀಲ ಕಮಿಷನರ್ ಅಜಯ್ ಮಿಶ್ರಾ ಜೊತೆ ವಾದಿ-ಪ್ರತಿವಾದಿ ವಕೀಲು ಮಸೀದಿ ತಲುಪಿದ್ದಾರೆ. ಜ್ಞಾನವಾಪಿ ಮಸೀದಿ ಆವರಣ ಮತ್ತು ಮುಖ್ಯ ಗೇಟ್‌ನಿಂದ ಸುಮಾರು ೧ ಕಿಲೋಮೀಟರ್ ದೂರದಲ್ಲಿ ಮಾಧ್ಯಮವನ್ನು ತಡೆಹಿಡಿಯಲಾಗಿದೆ. ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆ ಕಾರ್ಯ ಬೆಳಗ್ಗೆ ೮ ಗಂಟೆಗೆ ಆರಂಭಗೊಂಡಿದ್ದು, ಮಧ್ಯಾಹ್ನ ೧೨ ಗಂಟೆಯವರೆಗೆ ನಡೆಯಿತು. ಜ್ಞಾನವಾಪಿ ಮಸೀದಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಸಮೀಕ್ಷೆ ಹಿನ್ನೆಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ವಾರಣಾಸಿ ಅಂಜುಮನ್ ಅರೇಂಜ್ಮೆಂಟ್ಸ್ ಮಸಾಜಿದ್‌ಗೆ ಮಸೀದಿಯೊಳಗೆ ಬೀಗ ಹಾಕಲಾದ ಕೀಲಿಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಸ್ಥಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಎಲ್ಲಾ ಜನರಿಗೆ ನ್ಯಾಯಾಲಯ ಮನವಿ ಮಾಡಿದೆ.
ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಮುಂದುವರಿಸಿ, ಮೇ ೧೭ ರೊಳಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಮಧ್ಯೆ ಸುಪ್ರೀಂಕೋರ್ಟ್ ಸಹ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇರ್ಶಿಸಲು ಕೋರಿದ್ದ ಅರ್ಜಿಯನ್ನ ತಳ್ಳಿಹಾಕಿದೆ.