ಜ್ಞಾನವನ್ನು ಅರ್ಜಿಸುವದನ್ನು ನಿಲ್ಲಿಸಬಾರದು : ಗುಂಡಕನಾಳಶ್ರೀ

oppo_0

ತಾಳಿಕೋಟೆ:ಏ.17: ಮನುಜನು ಬುದ್ದಿವಂತನಾಗಿರಬೇಕಾದರೆ ಜ್ಞಾನವನ್ನು ಅರ್ಜಿಸುತ್ತಲೇ ಇರಬೇಕು ಮಾನವ ಜ್ಞಾನವನ್ನು ಅರ್ಜಿಸುವದನ್ನು ಎಂದು ನಿಲ್ಲಿಸುತ್ತಾನೋ ಅಂದಿನಿಂದ ಆತ ದಡ್ಡನಾಗುತ್ತಾನೆಂದು ಗುಂಡಕನಾಳ ಹಿರೇಮಠದ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರ ಮೊಮ್ಮಗಳಾದ ಕುಮಾರಿ ಭವಾನಿ ಘೋರ್ಪಡೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಕ್ಕೆ ಶ್ರೀಗಳು ನೇರವಾಗಿ ಭವಾನಿ ಘೋರ್ಪಡೆ ಕುಟುಂಬದವರೊಂದಿಗೆ ಸಂಪರ್ಕಿಸಿ ಅವರ ನಿವಾಸಕ್ಕೆ ಆಗಮಿಸಿ ಆಕೆಗೆ ಸರಸ್ವತಿ ವಿಗ್ರಹ ನೀಡಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ಇನ್ನೂ ಮುಂದೆ ಶಿಕ್ಷಣದಲ್ಲಿ ಮುಂದುವರೆದು ನಮ್ಮ ಜಿಲ್ಲೆಗೆ ಯಾವದಾದರೊಂದು ಹಿರಿಯ ಅಧಿಕಾರಿಯ ಸ್ಥಾನಮಾನವನ್ನು ಗಿಟ್ಟಿಸಿಕೊಂಡು ಜಿಲ್ಲೆಯ ಘನತೆ ಗೌರವವನ್ನು ತರುವ ಕಾರ್ಯ ಮಾಡಬೇಕೆಂದು ಆಶಿಸಿದ ಶ್ರೀಗಳು ನಾನು ಬುದ್ದಿವಂತ ನಾನು ವಿವೇಕಿ ಎಂದು ತಿಳಿದುಕೊಳ್ಳುವದೇ ಜ್ಞಾನವನ್ನು ಅರ್ಜಿಸಲು ದೊಡ್ಡ ಅಡ್ಡಿಯೆಂದರು. ಮಾನವನ ಜ್ಞಾನ ಅಭಿವೃದ್ದಿಯಾಗದಿರಲು ಅಜ್ಞಾನ ಆವರಿಸಲು ಅಜ್ಞಾನ ಅಬಿವೃದ್ದಿಯಾಗಲು ಮುಖ್ಯ ಕಾರಣ ನಾನು ಬುದ್ದಿವಂತ ಎಂದು ತಿಳಿದುಕೊಳ್ಳುವುದೇ ಕಾರಣವಾಗಿದೆ ಎಂದರು. ನಿಜವಾದ ವಿವೇಕಿ ತನ್ನನ್ನು ತಾನು ವಿವೇಕಿ ಎಂದು ಹೇಳಿಕೊಳ್ಳುವದಿಲ್ಲಾ ತೋರ್ಪಡಿಸಿಕೊಳ್ಳುವದಿಲ್ಲಾ ಆತ ಜ್ಞಾನವನ್ನು ಅರ್ಜಿಸಲೇ ಇರುತ್ತಾನೆ ಎನನ್ನಾದರೂ ನಿಲ್ಲಿಸಬಹುದು ಆದರೆ ಜ್ಞಾನವನ್ನು ಅರ್ಜಿಸುವದನ್ನು ಮಾತ್ರ ನಿಲ್ಲಿಸಬಾರದೆಂದು ಕುಮಾರಿ ಭವಾನಿ ಘೋರ್ಪಡೆಗೆ ತಿಳುವಳಿಕೆ ನೀಡಿದ ಶ್ರೀಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97 ಅಂಕ ಪಡೆದು ಶಾಲೆಯ ಹಾಗೂ ಶಿಕ್ಷಕರ ಅಲ್ಲದೇ ಪಾಲಕರ ಹೆಸರನ್ನು ಗಳಿಸುವಲ್ಲಿ ಮುಂದಾದ ಕುಮಾರಿ ಭವಾನಿ ಘೋರ್ಪಡೆ ಗುರುವಿನ ಆಶೀರ್ವಾದ ಸದಾ ಆಕೆಯ ಮೇಲಿದೆ ಎಂದು ಆಕೆ ಮುಂದೆ ಕಲಿಯಲು ಅಪೇಕ್ಷಿಸಿದ ಮಾರ್ಗ ಸರಿದಾರಿ ತೋರಲಿ ಎಂದು ಶ್ರೀಗಳು ಆಶಿಸಿದರು.
ಈ ಸಮಯದಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಗುರುರಾಜ ಕಲಾಲ, ಪ್ರಕಾಶ ಪಾಟೀಲ, ಕಿರಣ ಬಡಿಗೇರ, ವಿಜಯ ಕಲಾಲ, ಮಹಾಂತೇಶ ಸಜ್ಜನ, ಚನ್ನಯ್ಯ ಹಿರೇಮಠ, ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ಅಂಬಾಜಿ ಘೋರ್ಪಡೆ, ಪ್ರವೀಣ್ ಘೋರ್ಪಡೆ ಉಪಸ್ತಿತರಿದ್ದರು.