ಜ್ಞಾನಯೋಗಿ ಸಿದ್ದೇಶ್ವರ ಶ್ರೀ ಪಂಚಭೂತಗಳಲ್ಲಿ ಲೀನ

ವಿಜಯಪುರ,ಜ 4: ನಾಡು ಕಂಡ ಅಪರೂಪದ ಸಂತ, ನಡೆದಾಡುವ ದೇವರೆಂದು ಕರೆಯಲಾಗುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಅಂತಿಮ ಸಂಸ್ಕಾರವನ್ನು ಮಂಗಳವಾರ ರಾತ್ರಿ ನಗರದ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿಸಲಾಯಿತು.
ಮಂಗಳವಾರ ಸಂಜೆ 5 ಗಂಟೆಗೆ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಗೋದಾವರಿ ಹೋಟೆಲ್, ಶಿವಾಜಿ ವೃತ್ತ, ಲಕ್ಷ್ಮೀಗುಡಿ, ಗಾಂಧಿವೃತ್ತ, ಶ್ರೀ ಸಿದ್ದೇಶ್ವರ ದೇವಸ್ಥಾನ ಹಾಗೂ ಬಿಎಲ್‍ಡಿಇ ರಸ್ತೆ ಮಾರ್ಗವಾಗಿ ಸಂಜೆ 7 ಗಂಟೆಗೆ ಜ್ಞಾನಯೋಗಾಶ್ರಮದ ಆವರಣಕ್ಕೆ ಕರೆ ತಂದು, ಶ್ರೀಗಳ ಇಚ್ಛೆಯಂತೆ ಗಂಧದ ಕಟ್ಟಿಗೆಗಳನ್ನು ಇಟ್ಟು,ಕರ್ಪೂರ, ತುಪ್ಪದೊಂದಿಗೆ ಸರಳವಾಗಿ ವಿಧಿ ವಿಧಾನಗಳೊಂದಿಗೆ ಜನಪ್ರತಿನಿಧಿಗಳು, ಮಠಾಧೀಶರು ಪೂಜ್ಯರ ಅಂತಿಮ ನಮನ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ನೀಡಲಾಯಿತು.
ಸಕಲ ಸಿದ್ಧತೆ :
ಶ್ರೀ ಸಿದ್ದೇಶ್ವರ ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಶ್ರೀಗಳ ಅಂತ್ಯ ಸಂಸ್ಕಾರ ಹಾಗೂ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ಆಗಮಿಸುವ ಸಹಸ್ರಾರು ಭಕ್ತಾದಿಗಳಿಗೆ ಶ್ರೀಗಳ ದರ್ಶನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವರಿಗೆ ವಿಜಯಪುರ ನಗರದ ರಿಂಗ್ ರೋಡ ಮೂಲಕ ನಗರ ಪ್ರವೇಶ ಮಾಡಿ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಷ ಚಂದ್ರ ಭೋಸ್ ರಸ್ತೆ ಮೂಲಕ ನಡೆದುಕೊಂಡು ಸೈನಿಕ ಶಾಲೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ನಗರದ ವಿವಿದೆಡೆ ಸೂಕ್ತ ಪೆÇಲೀಸ್ ಭದ್ರತೆ ಕಲ್ಪಿಸುವುದರ ಮೂಲಕ ಅಂತಿಮ ಸಂಸ್ಕಾರದಲ್ಲಿ ಯಾವುದೇ ಗೊಂದಲವಾಗದಂತೆ ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿಗಳ ನುಡಿ-ನಮನ:
ತಮ್ಮ ಪ್ರವಚನಗಳ ಮೂಲಕ ಲಕ್ಷಾಂತರ ಜನರ ಮನ ಪರಿವರ್ತಿಸಿ,ಬದುಕುವ ರೀತಿ ತಿಳಿಸಿಕೊಟ್ಟ ಮಹಾನ್ ವೈರಾಗ್ಯಮೂರ್ತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.ಇವರಿದ್ದ ಸಮಯದಲ್ಲಿಯೇ ನಾವೆಲ್ಲರೆಲ್ಲರಿರುವುದು ನಮ್ಮ ಪುಣ್ಯ ಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ಸೈನಿಕ ಶಾಲೆ ಆವರಣದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸ್ವಾರ್ಥ ಬಯಸದೇ, ಜಗತ್ತಿನ ಯಾವುದೇ ವಸ್ತುವಿನ ಮೋಹ ಹೊಂದದೇ ನಿರ್ಮೋಹಿಗಳಾಗಿ ಬಾಳು-ಬದುಕಿದ ಶ್ರೀಗಳು ಬದುಕಿದ ರೀತಿ, ಅವರ ವ್ಯಕ್ತಿತ್ವ, ವಿಚಾರಧಾರೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ.
ನನ್ನ ಪ್ರಕಾರ ಅಗ್ನಿಸ್ಪರ್ಶ ಮಾಡುವುದರಿಂದ ಆತ್ಮ ಈ ನಿಸರ್ಗದಲ್ಲಿ ಸೇರಿಕೊಳ್ಳುತ್ತವೆ ಎಂಬ ವೈಚಾರಿಕ ಮನೋಭಾವನೆ ಇದೆ.ಈ ಭೂಮಿ, ಗಿಡ-ಮರಗಳು ಸೇರಿದಂತೆ ನಿಸರ್ಗದಲ್ಲೆಡೆ ಅವರ ಆತ್ಮ ಸೇರಿಕೊಳ್ಳುವುದರಿಂದ ಈ ನಿಸರ್ಗ ಇರುವವರೆಗೂ ಯಾರೂ ಅವರನ್ನು ಮನದಿಂದ ನೆನೆಯುತ್ತಾರೆ ಅಂತಹವರಿಗೆ ಆಂತರಿಕವಾದಂತಹ ವೈಚಾರಿಕ ದರ್ಶನವಾಗುವ ಚಿಂತನೆಯ ಅವಶ್ಯಕತೆ ಇದೆ. ಎಲ್ಲಿಯವರೆಗೂ ಈ ಭೂಮಿ, ನೀರು, ನಿಸರ್ಗ ಇದೆಯೋ ಅಲ್ಲಿಯವರೆಗೆ ನಾವು ಅವರನ್ನು ಈ ಪ್ರಕೃತಿಯ ಮೂಲಕ ಪಡೆದುಕೊಳ್ಳಬಹುದಾಗಿದೆ . ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರು ಹೇಳಿದಂತೆ, ಸಿದ್ದೇಶ್ವರ ಶ್ರೀಗಳ ಭಕ್ತಿ, ಪೂಜೆ, ವಿಶ್ವಾಸ, ಅಂತಕರಣ; ವಾತ್ಸಲ್ಯ ಅವರ ಅಂತಿಮ ದರ್ಶನಕ್ಕೆ ಸೇರಿದಂತೆ ಲಕ್ಷಾಂತರ ಜನರನ್ನು ನೋಡಿದಾಗ ಈ ಜನರ ಮಧ್ಯೆಯೇ ಶ್ರೀಗಳು ಇರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ.
ಜೀವನದಲ್ಲಿ ಸಾವು ಎನ್ನುವುದು ಒಂದು ಪ್ರಕ್ರಿಯೇ ಅಷ್ಟೆ. ಮರಣದ ನಂತರವೂ ಬದುಕುಬಲ್ಲದು ಎಂಬುದು ಸಾಧಕರಿಗೆ ಗೊತ್ತು. ಸಿದ್ದೇಶ್ವರ ಶ್ರೀಗಳ ಬದುಕು ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದೆ. ಶ್ರೀಗಳ ಬದುಕು, ಇಡೀ ಜಗತ್ತಿಗೆ ಪ್ರೇರಣಾದಾಯಕ. ಅವರ ವಿಚಾರಧಾರೆಗಳನ್ನು ಉಳಿಸಿಕೊಂಡು, ಜಗತ್ತಿನಾದ್ಯಂತ ಪ್ರಚುರಪಡಿಸುವುದರಿಂದ ಶ್ರೀಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಅಂತಿಮ ದರ್ಶನ ಪಡೆದ ಗಣ್ಯರು :
ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ರಾಜ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಸಚಿವರಾದ ಗೋವಿಂದ ಎಂ.ಕಾರಜೋಳ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮಲು, ವಿ.ಸೋಮಣ್ಣ, ಶಂಕರ ಪಾಟೀಲ ಮುನೇನಕೊಪ್ಪ, ಬಸವರಾಜ ಹೊರಟ್ಟಿ,ಎ.ಎಸ್.ಪಾಟೀಲ ನಡಹಳ್ಳಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ,ಎಂ.ಬಿ.ಪಾಟೀಲ, ಪ್ರಕಾಶ ರಾಠೋಡ, ಯಶವಂತರಾಯಗೌಡ ಪಾಟೀಲ,ಸೋಮನಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆಸೇರಿದಂತೆ ನಾಡಿನ ಹಾಗೂ ಜಿಲ್ಲೆಯ ವಿವಿಧ ಶಾಸಕರು ಸಂಸದರು, ಜನಪ್ರತಿನಿಧಿಗಳು, ಮಠಾಧೀಶರು ಪೂಜ್ಯರ ಅಂತಿಮ ದರ್ಶನ ಪಡೆದು, ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು. ಸೈನಿಕ ಶಾಲೆಯಲ್ಲಿ ಸಕಲ ಸರ್ಕಾರಿ ಗೌರವಗಳನ್ನು ನೀಡಲಾಯಿತು.