ಜ್ಞಾನಧಾರೆ ಎರೆಯುವ ಗುರುವರ್ಯರು ಪೂಜನೀಯರು: ಸಹನಾ ರವಿ

ದಾವಣಗೆರೆ.ಜು.೧೪: ನಾವು ಕಲಿತ ವಿದ್ಯೆ ಮಾತ್ರ ನಮ್ಮೊಂದಿಗೆ ಕೊನೆಯವರೆಗೂ ಬರುತ್ತದೆ. ಅಂತಹ ಜ್ಞಾನವನ್ನು ಧಾರೆ ಎರೆದು ನಮ್ಮ ಭವಿಷ್ಯ ರೂಪಿಸುವ ಗುರುವರ್ಯರು ಸದಾ  ಸ್ಮರಣೀಯರು ಎಂದು ಜಿ.ಪಂ. ಮಾಜಿ ಅಧ್ಯಕ್ಷರು, ನ್ಯಾಷನಲ್ ಕಾನ್ವೆಂಟ್ ನ ಕಾರ್ಯದರ್ಶಿ ಸಹನಾ ರವಿ ಹೇಳಿದರು.ನಗರದ ನ್ಯಾಷನಲ್ ಕಾನ್ವೆಂಟ್ ಸಭಾಂಗಣದಲ್ಲಿ  ಸಂಸ್ಕಾರ ಭಾರತಿ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗುರು ಎಂಬ ಶಬ್ದವೇ ಶಕ್ತಿಯುತ ವಾದದ್ದು. ಗುರುಪೌರ್ಣಿಮೆಯ ಈ ದಿನ ವಿಶೇಷವಾಗಿದ್ದು, ನಮ್ಮ ಗುರು ವೃಂದಕ್ಕೆ ನಮಿಸುವ ದಿನವಾಗಿದೆ. ಇಂತಹ ಸನಾತನ ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಅಗತ್ಯವಿದೆ ಎಂದರು.ತಮ್ಮ ಗುರು ವೃಂದವನ್ನು ಸ್ಮರಿಸಿದ ಸಹನಾ, ನಾನು ಈ ಸ್ಥಾನಕ್ಕೆ ಬರಬೇಕೆಂದರೆ, ನನಗೆ ಶಿಕ್ಷಣ ನೀಡಿ, ತಿದ್ದಿ ಬೆಳೆಸಿದ ಗುರುಗಳೇ ಕಾರಣ. ಅವರೆಲ್ಲರನ್ನೂ ನಾನು ಈ ಸಂದರ್ಭದಲ್ಲಿ  ಸ್ಮರಿಸುತ್ತೇನೆ ಎಂದು ಹೇಳಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ದಿವಾಕರ್, ಆಷಾಢ ಶುದ್ಧ ಹುಣ್ಣಿಮೆ ವ್ಯಾಸರ ಜನ್ಮದಿನವಾಗಿದ್ದು, ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಗುರು ಪರಂಪರೆಯಲ್ಲಿ ವ್ಯಾಸರಿಗೆ ವಿಶೇಷ ಸ್ಥಾನವಿದೆ.  ಆದಿಗುರು ಶಿವನನ್ನು ದಕ್ಷಿಣಾಮೂರ್ತಿ ಎಂದು ಕರೆಯುತ್ತಾರೆ ಎಂದ ಅವರು, ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನೇ ಗುರು. ಗುರುಪೂರ್ಣಿಮೆ ನಮ್ಮ ಗುರುವೃಂದಕ್ಕೆ ಗೌರವ ಸಲ್ಲಿಸುವ ದಿನವಾಗಿದೆ ಎನ್ನುವ ಮೂಲಕ ಗುರುಪೂರ್ಣಿಮೆಯ ಮಹತ್ವವನ್ನು ವಿಸ್ತಾರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.ಇದೇ ವೇಳೆ ಸಂಸ್ಕಾರ ಭಾರತಿ ವತಿಯಿಂದ ನಿವೃತ್ತ ಶಿಕ್ಷಕರಾದ ಎನ್. ಬಸವರಾಜಪ್ಪ ಹಾಗೂ ಬಿ.ಜಿ. ಸುರೇಂದ್ರಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜಪ್ಪ, ಮಕ್ಕಳು ಶಿಕ್ಷಕರು ಹೇಳಿದ್ದನ್ನು ಅನುಸರಿಸುತ್ತಾರೆ. ಹಾಗಾಗಿ ಶಿಕ್ಷಕನಾದವನು ಮಾದರಿಯಾಗಿರಬೇಕು.  ಆತ ತನ್ನ ವೃತ್ತಿ, ಬೋಧನೆ ಹಾಗೂ ಮಕ್ಕಳನ್ನು ಪ್ರೀತಿಸಬೇಕು ಎಂದರು.ಮತ್ತೊಬ್ಬ ಶಿಕ್ಷಕರ ಸುರೇಂದ್ರಪ್ಪ ಮಾತನಾಡಿ, ನಾನು ಚಿಕ್ಕವನಿದ್ದಾಗ ನನಗೆ ಸ್ಫೂರ್ತಿ ನೀಡಿದ್ದು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರು. ಅವರಂತೆ ದೇಶಪ್ರೇಮವನ್ನು ಮಕ್ಕಳಾದ ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕು. ತಾಯ್ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ. ಮಹಾಲಿಂಗಪ್ಪ ಮಾತನಾಡಿ, ಸಂಸ್ಕಾರ ಭಾರತಿ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದರಲ್ಲದೆ,  ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿನದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ರಾದ ರವಿ ಉಪಸ್ಥಿತರಿದ್ದರು. ಸಂಸ್ಕಾರ ಭಾರತಿ ಜಿಲ್ಲಾ ಮಹಿಳಾ ಕಾರ್ಯದರ್ಶಿ ದೇವಿಕಾ ಸುನೀಲ್, ಖಜಾಂಚಿ ಬಿ. ದಿಳ್ಯಪ್ಪ, ಕಾರ್ಯದರ್ಶಿ ವಿವೇಕಾನಂದ ಸ್ವಾಮಿ, ಸದಸ್ಯರಾದ ಪರಮೇಶ್ವರಪ್ಪ, ಗುಡ್ಡಪ್ಪ, ಗಣೇಶ್ ಶೆಣೈ,  ರಾಜಶೇಖರ್ ಬೆನ್ನೂರು, ನಾಗಭೂಷಣ್,  ಉಮಾದೇವಿ, ಸತ್ಯಭಾಮಾ ಇನ್ನಿತರರಿದ್ದರು.ಉಮಾದೇವಿ ಧ್ಯೇಯ ಗೀತೆ ಹಾಡಿದರು. ಶಿಕ್ಷಕಿಯರಾದ ಪ್ರಫುಲ್ಲಾ ಸ್ವಾಗತಿಸಿದರು. ಮಮತಾ ನಿರೂಪಿಸಿದರು.  ದಿಳ್ಯೆಪ್ಪ ವಂದಿಸಿದರು.

Attachments area

ReplyForward