ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಿ: ಕಾಶಿನಾಥ ಗುತ್ತೇದಾರ್

(ಸಂಜೆವಾಣಿ ವಾರ್ತೆ)
ಚಿತ್ತಾಪುರ:ಜೂ.5: ಗ್ರಂಥಾಲಯ ಜ್ಞಾನದ ಭಂಡಾರ ಇದ್ದಂತೆ ಹೀಗಾಗಿ ಯುವಕರು ಅಲ್ಲಿ ಇಲ್ಲಿ ಕುಳಿತುಕೊಂಡು ಹರಾಟೆ ಹೊಡೆದು ವ್ಯರ್ಥ ಸಮಯವನ್ನು ಕಳೆಯದೇ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ್ ಮಂದಿರದ ಹತ್ತಿರ ತಾಂಡಾ ಅಭಿವೃದ್ದಿ ನಿಗಮದಿಂದ ಮಂಜೂರಾದ ನೂತನ ಗ್ರಂಥಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗುವ ಪುಸ್ತಕಗಳು, ಭಾರತದ ಸಂವಿಧಾನ, ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಸಾವಿರಾರು ಪುಸ್ತಕಗಳು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವ ಗ್ರಂಥಾಲಯಗಳು ಅಮೂಲ್ಯವಾದ ಜ್ಞಾನ ಭಂಡಾರ ಎಂದರು. ಪ್ರತಿಯೊಬ್ಬರು ತಮ್ಮ ಜ್ಞಾನದ ಹಸಿವನ್ನು ತೀರಿಸಿಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಜತೆಗೆ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ದೇವರ ಮೂರ್ತಿ ಇರುವುದಕ್ಕೆ ಎಲ್ಲರೂ ದೇವಸ್ಥಾನ ಎಂದು ಭಾವಿಸಿದ್ದಾರೆ ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗ್ರಂಥಾಲಯವನ್ನು ದೇವಸ್ಥಾನ ಎಂದು ಭಾವಿಸಿಕೊಂಡು ಜೀವನದ ಅತ್ಯಮೂಲ್ಯ ಸಮಯ ಗ್ರಂಥಾಲಯದಲ್ಲೇ ಕಳೆದಿದ್ದರಿಂದ ಇಂದು ಮಹಾನ್ ಜ್ಞಾನಿಯಾಗಿದ್ದಾರೆ ಎಂದು ಬಣ್ಣಿಸಿದರು. ತಾಂಡಾದಲ್ಲಿ ಉದ್ಘಾಟನೆಯಾದ ಗ್ರಂಥಾಲಯವನ್ನು ದೇವಸ್ಥಾನದಂತೆ ನೋಡಿಕೊಂಡು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗ್ರಂಥಾಲಯಕ್ಕೆ ನಾನು ವಯಕ್ತಿಕವಾಗಿ 5 ಸಾವಿರ ವೆಚ್ಚದ ವಿವಿಧ ಪುಸ್ತಕಗಳ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಗುತ್ತೇದಾರ ಹೇಳಿದರು.
ಪುರಸಭೆ ಸದಸ್ಯ ಜಗದೀಶ ಚವ್ಹಾಣ್ ಇವತ್ತಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ.ಈ ಗ್ರಂಥಾಲಯ ತಾಂಡಾ ವಿದ್ಯಾರ್ಥಿಗಳ ಕಲಿಕೆಗೆ ಜನಸಾಮಾನ್ಯರ ಜ್ಞಾನಾಭಿವೃದ್ಧಿಗೆ ಉತ್ತಮ ಅವಕಾಶಕ್ಕೆ ಕಲ್ಪಿಸಿದಂತೆ ಆಗಿದೆ ಇದರಿಂದ ಪ್ರತಿಯೊಬ್ಬರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ನಿಗಮದ ಜಿಲ್ಲಾ ಅಭಿವೃದ್ದಿ ಅಧಿಕಾರಿ ಸೂರ್ಯಕಾಂತ ರಾಠೋಡ ಮಾತನಾಡಿ, ಗ್ರಂಥಾಲಯಕ್ಕೆ ತಾಂಡಾ ಅಭಿವೃದ್ದಿ ನಿಗಮದಿಂದ 1ಲಕ್ಷ ವೆಚ್ಚದಲ್ಲಿ ವಿವಿಧ ಸ್ಪರ್ಧಾತ್ಮಕ ಹಾಗೂ ಸಾಮಾನ್ಯ ಪುಸ್ತಕಗಳು ಹಾಗೂ 1 ಲಕ್ಷ ವೆಚ್ಚದ ಪೀಠೋಪಕರಣಗಳು ಸೇರಿದಂತೆ ಒಟ್ಟು 2ಲಕ್ಷ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬಂಜಾರ ಸಮಾಜದ ಹಿರಿಯ ಮುಖಂಡ ತುಕಾರಾಮ್ ನಾಯಕ, ಗೋರ್ ಸೇನಾ ಜಿಲ್ಲಾಧ್ಯಕ್ಷ ಅಶ್ವಥ ರಾಠೋಡ, ಶಿವರಾಮ ಚವ್ಹಾಣ, ಬೊಮ್ಮು ಪವಾರ, ಶಿಕ್ಷಕರಾದ ಛತ್ರು ರಾಠೋಡ, ವಿಶ್ವನಾಥ ರಾಠೋಡ ಮಾತನಾಡಿದರು. ದೇವಿದಾಸ ನಾಯಕ, ತುಕಾರಾಮ ಪವಾರ, ಕಿರಣ ನಾಯಕ, ಲಕ್ಷ್ಮಣ ನಾಯಕ, ಆರ್.ಸಿ.ರಾಮನ್, ರವೀಂದ್ರ ನಾಯಕ, ಕುಮಾರ ಚವ್ಹಾಣ, ವಾಸು ರಾಠೋಡ, ಭೀಮಾ ನಾಯಕ, ಪಿಪಿನ್ ರಾಠೋಡ, ಅನೀಲ ಪವಾರ, ಆಕಾಶ ಚವ್ಹಾಣ, ಧರ್ಮು ಜಾಧವ, ಪ್ರಭುದಾಸ ರಾಠೋಡ, ಹೀರಾಬಾಯಿ ರಾಠೋಡ ಇತರರು ಇದ್ದರು. ಭೀಮಸಿಂಗ ಪವಾರ ಪ್ರಾರ್ಥಿಸಿದರು, ಜಗದೀಶ ಪವಾರ ನಿರೂಪಿಸಿ ವಂದಿಸಿದರು.