ಜ್ಞಾನದ ಬೆಳಕಿನ ಸೂರ್ಯ ಸಿದ್ದೇಶ್ವರ ಸ್ವಾಮೀಜಿ

ಕಲಬುರಗಿ:ಜ.21:ನಡೆದಾಡುವ ದೇವರು ವಿಜಯಪುರದ ಸಿದ್ದೇಶ್ವರ ಸ್ವಾಮಿಗಳು ಇದುವರೆಗೂ ನುಡಿದಿದ್ದಾರೆ. ಇನ್ಮುಂದೆ ಅದರಂತೆ ನಡೆಯಬೇಕಾಗಿರುವ ಹೊಣೆ ಎಲ್ಲರ ಮೇಲಿದೆ. ಸಿದ್ದೇಶ್ವರ ಅಪ್ಪಗಳು ನಾಡಿಗೆ ಜ್ಞಾನವನ್ನು ನೀಡಿದ ಸೂರ್ಯ ಎಂದು ವಿಜಯಪುರದÀ ಜ್ಞಾನಯೋಗಾಶ್ರಮ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮಿಗಳು, ಸುಲಫಲ ಮಠ ಮತ್ತು ಶ್ರೀಶೈಲ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಚವದಾಪುರಿ ಹಿರೇಮಠದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯರು ಹಾಗೂ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಪಟದಲ್ಲಿ ಆಧ್ಯಾತ್ಮಿಕ ಪ್ರವಚನ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಈಚೆಗೆ ಶಿವೈಕ್ಯರಾದ ವಿಜಯಪುರದ ಸಿದ್ದೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜ್ಞಾನ ಪರ್ವತವಾಗಿದ್ದ ಅವರು, ತಾರತಮ್ಯ ಮಾಡದೆ ಎಲ್ಲರಿಗೂ ಜ್ಞಾನವನ್ನು ಸೂರ್ಯನ ಕಿರಣದಂತೆ ನೀಡುವ ಮೂಲಕ ಜನರಲ್ಲಿನ ಅಜ್ಞಾನವನ್ನು ತೊಡೆದು ಹಾಕಲು ಪ್ರಯತ್ನಿಸಿದ ಶತಮಾನದ ಶ್ರೇಷ್ಠ ಸಂತ ಎಂದರು.
ವಿಜಯಪುರದ ಜ್ಞಾನಯೋಗಾಶ್ರಮ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮಿ ಮಾತನಾಡಿ, ಗುರು ಎನ್ನುವ ಪದವೇ ಶಕ್ತಿಯುತವಾಗಿದೆ. ದೇಶದಲ್ಲಿ ಉಂಟಾಗು ಕ್ಷೋಭೆಗಳನ್ನು ಹೋಗಲಾಡಿಸಲು, ಪರಿವರ್ತನೆಗಾಗಿ ಭಗವಂತ ಆಗಾಗ ಸಂತ ಶ್ರೇಷ್ಠರನ್ನು ಭೂಮಿಗೆ ಕಳುಹಿಸುತ್ತಾನೆ, ಅದರ ಭಾಗವಾಗಿ ಸಿದ್ದೇಶ್ವರ ಅಪ್ಪಗಳು ಬಂದಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ ಅನ್ನುವುದಕ್ಕಿಂದಲೂ ಲಕ್ಷಾಂತರ ಭಕ್ತರ ಹೃದಯ ವಾಸಿಗಳಾಗಿದ್ದಾರೆ ಎಂದು ನುಡಿದರು.
55 ವರ್ಷಗಳ ಆಧ್ಯಾತ್ಮಿಕ ಸೇವೆ ಹಾಗೂ ಅಕ್ಷರದ ಸೇವೆ ಮಾಡಿದ ಸಿದ್ದಶ್ವರ ಶ್ರೀಗಳು ನಿರ್ಮೋಹಿಗಳಾಗಿ ಅಹಂಕಾರ ಹೊಡೆದೊಡಿಸಿ ತಮ್ಮ ಹೃದಯಲ್ಲಿ ಭಗವಂತನ್ನು ಕುಳ್ಳಿರಿಸಿಕೊಂಡಿದ್ದರು. ಅವರು ಜೀವಂತ ದೇವಾಲಯವಾಗಿದ್ದರು ಎಂದು ಹೇಳಿದರು. ಕಲಬುರಗಿ ಆಧ್ಯಾತ್ಮದ ತವರಾಗಿದೆ. ಆ ಕಾರಣಕ್ಕೆ ಇಲ್ಲಿ ಸಿದ್ದೇಶ್ವರ ಶ್ರೀಗಳು ಮೂರು ಸಲ ಪ್ರವಚನ ನಡೆಸಿಕೊಟ್ಟಿದ್ದಾರೆ. ಎಲ್ಲರು ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಯಳಸಂಗಿಯ ಪರಮಾನಂದ ಸ್ವಾಮೀಜಿಗಳು, ಹುಲ್ಯಾಳದ ಗುರುದೇವ ಆಶ್ರಮದ ಹರ್ಷಾನಂದ ಶ್ರೀಗಳು, ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳು ಮೊದಲಾದವರು ಮಾತನಾಡಿ ಗುರುನಮನ ಸಲ್ಲಿಸಿ, ಸಿದ್ದೇಶ್ವರ ಶ್ರೀಗಳಲ್ಲಿ ಕಾಣುವುದು ಎರಡೆ ಒಂದು ನಿಷ್ಕಲ್ಮಶ ಪ್ರೇಮ ಮತ್ತು ಪರಿಪೂರ್ಣವಾದ ಜ್ಞಾನ. ಹೀಗಾಗಿಯೇ ಅವರು ಜ್ಞಾನದ ಪರ್ವತವಾದರು. ಬಯಕೆಗಳಿಲ್ಲದ ಸ್ವಾಮೀಜಿಯಾಗಿದ್ದರು. ಹೀಗಾಗಿಯೇ ಎಲ್ಲವೂ ಅವರಿಗೆ ಲಭಿಸಿತು ಎಂದರು.

ಸುಲಫಲ ಮಠ ಮತ್ತು ಶ್ರೀಶೈಲ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸನ್ನಿಧಾನ ವಹಿಸಿದ್ದರು. ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪ ಅಧ್ಯಕ್ಷತೆ ವಹಿಸಿದ್ದರು. ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು, ಬ್ರಹ್ಮಮಠದ ಗುರುಬಸವ ಸ್ವಾಮೀಜಿ, ಮುತ್ಯಾನ ಬಬಲಾದಿನ ಗುರುಪಾದಲಿಂಗ ಶಿವಯೋಗಿಗಳು, ಹಂಚಿನಾಳದ ಚನ್ನಮಲ್ಲ ಸ್ವಾಮೀಜಿ, ಡಾಕುಳಕಿಯ ಚನ್ನಬಸವ ಮಹಾರಾಜರು, ವಿಜಯಪುರದ ಬ್ರಹ್ಮಾನಂದ ಸ್ವಾಮೀಜಿ, ಸಿದ್ದಲಿಂಗ ಸ್ವಾಮಿ, ರಾಜವಾನಂದ ಸ್ವಾಮಿ, ಹರಿಹರದ ಶಿವಕುಮಾರ ಸ್ವಾಮಿ, ಮಾಜಿ ಶಾಸಕರಾದ ಅರುಣಾದೇವಿ ಪಾಟೀಲ್ ರೇವೂರ, ಅಲ್ಲಮಪ್ರಭು ಪಾಟೀಲ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಆಧ್ಯಾತ್ಮಿಕ ಪ್ರವಚನ ಸಮಿತಿಯ ಪ್ರಮುಖರಾದ ಸುರೇಶ ಪಾಟೀಲ್ ಜೋಗೂರ, ಅಪ್ಪು ಕಣಕಿ, ಈರಣ್ಣ ಗುಳೇದ, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಸಂತೋಷ ರಾಂಪುರೆ, ಸಂಗಮೇಶ ರಾಜೋಳಿ, ಅಂಬಾರಾಯ ಡಿಗ್ಗಿ,ಗುರು ಕೋರವಾರ, ಶಿವಾನಂದ ಪಾಟೀಲ್ ಅಷ್ಟಗಿ, ವಿಶ್ವನಾಥ ಪಾಟೀಲ್, ವಿಶ್ವನಾಥ ಮಲಕೂಡ, ಶರಣು ಪಪ್ಪಾ, ಜಗದೀಶ ಅಯ್ಯಪ್ಪಗೌಡರ, ಶಂಭುಲಿಂಗ ಬಳಬಟ್ಟಿ, ರಾಜು ದೇವದುರ್ಗ ಮೊದಲಾದವರಿದ್ದರು. ಮಲ್ಲಿಕಾರ್ಜುನ ಗರೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪ್ರಿಯಾಂಕಾ ಪಾಟೀಲ್ ನಿರೂಪಿಸಿದರು. ಸಮಾಜ ಸೇವಕ ಉಮೇಶ ಶೆಟ್ಟಿ ವಂದಿಸಿದರು.

ವಿಶ್ವದ ಏಳು ಅದ್ಭುತಗಳಲ್ಲಿ ವಿಜಯಪುರದ ಗೋಲಗುಮ್ಮಟವು ಒಂದು, ಇನ್ನೂ ಎಂಟನೇಯ ಅದ್ಬುತ ಅಂದರೆ ಸಿದ್ದೇಶ್ವರ ಸ್ವಾಮೀಜಿಗಳು, ಅವರು ಜ್ಞಾನ ಗುಮ್ಮಟವಾಗಿದ್ದರು. ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು. ಇಡಿ ಸಮಾಜಕ್ಕೆ ಜ್ಞಾನವನ್ನು ಹಂಚುವ ಕಾಯಕ ಮಾಡಿದ ಸಂತ ಶ್ರೇಷ್ಠ.

| ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸುಲಫಲ ಮಠ ಮತ್ತು ಸಾರಂಗಮಠ ಶ್ರೀಶೈಲ

ಸತ್ಸಂಗಕ್ಕಾಗಿ ರಾಜ್ಯವನ್ನೇ ತೊರೆದ ರಾಜರುಗಳು ಇತಿಹಾಸದಲ್ಲಿ ಸಿಗುತ್ತಾರೆ. ಆದರೆ, ಈಗ ಯಾರು ನಿಮ್ಮ ಸಿರಿತನ ಸಂಸಾರ ತೊರೆಯವುದು ಬೇಡ. ಇಷ್ಟು ದಿನಗಳ ಸಿದ್ದೇಶ್ವರ ಶ್ರೀಗಳು ನುಡಿದು ಹೋಗಿದ್ದಾರೆ. ಇನ್ಮುಂದೆ ನಾವೆಲ್ಲರು ಅದರಂತೆ ನಡೆದು ತೋರಿಸೋಣ. ಆ ಮೂಲಕ ಅವರನ್ನು ಸದಾ ಸ್ಮರಿಸೋಣ.
| ಪರಮಾನಂದ ಸ್ವಾಮಿಗಳು ಯಳಸಂಗಿ