ಜ್ಞಾನದ ಬೆಳಕನ್ನು ನೀಡುವ ಸಂಕೇತವೇ ದೀಪೋತ್ಸವ:ಅನ್ನದಾನ ಶ್ರೀಗಳು

ಸೈದಾಪುರ:ನ.23:ಮನುಷ್ಯನ ಮನೆ-ಮನಗಳಲ್ಲಿ ಅಡಗಿರುವ ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಜ್ಞಾನದ ಬೆಳಕನ್ನು ನೀಡುವುದರ ಸಂಕೇತವೇ ಲಕ್ಷ ದೀಪೋತ್ಸವ ಎಂದು ಮುಂಡರಗಿಯ ಅನ್ನದಾನೇಶ್ವರ ಶ್ರೀಮಠದ ನಿರಂಜನ ಜಗದ್ಗುರು ನಾಡೋಜ ಡಾ.ಅನ್ನದಾನ ಮಹಾಶಿವಯೋಗಿಗಳು ಆಶೀರ್ವಾಣಿ ನೀಡಿದರು.

ಸಮೀಪದ ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದಲ್ಲಿ ಪವಿತ್ರ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಂತ ಪರಿಶ್ರಮದಿಂದ ಪ್ರಗತಿ ಸಾಧಿಸಿದ ವ್ಯಕ್ತಿ ಸಮಾಜದಲ್ಲಿ ಬೆಲೆ ಜಾಸ್ತಿ ಹೀಗಾಗಿ ಭಕ್ತರು ತನ್ನ ಜೀವನದ ಶಿಲ್ಪಿ ತಾನೇ ಎಂಬುದನ್ನು ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಸುಧಾರಣೆಗೆ ಮಠ-ಮಂದಿರಗಳ ಪಾತ್ರ ಬಹುಮುಖ್ಯ ಅದಕ್ಕೆ ಪೂರಕವಾಗಿ ಶ್ರೀಮಠದ ಪಂಚಮ ಸಿದ್ಧಲಿಂಗ ಶ್ರೀಗಳು ವರ್ಷದುದ್ದಕ್ಕೂ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಭಕ್ತರನ್ನು ಸೇರಿಸಿ ಅವರಿಗೆ ಜ್ಞಾನದ ಬುತ್ತಿಯನ್ನು ಉಣಬಡಿಸುತ್ತಿದ್ದು ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಶುಭಾಶೀರ್ವಾದ ಮಾಡಿದರು.

ಕಾರ್ಯಕ್ರಮದಲ್ಲಿ ನೇರಡಗಂ ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು, ಸಿದ್ಧಲಿಂಗ ಶ್ರೀಗಳು ವಳಬಳ್ಳಾರಿ, ಗುರುಪಾದ ಶ್ರೀಗಳು ಶಹಾಪುರ, ಮುರುಘರಾಜೇಂದ್ರ ಶ್ರೀಗಳು ಖಾಸಾ ಮಠ ಗುರುಮಠಕಲ್, ಪ್ರಭು ನೀಲಕಂಠಸ್ವಾಮಿಗಳು ಬೈಲ ಹೊಂಗಲ, ಶಿವಲಿಂಗ ಸ್ವಾಮಿಗಳು ಮಾದನಹಿಪ್ಪರಗಿ, ಸಿದ್ಧಲಿಂಗ ಸ್ವಾಮಿಗಳು ಯಡ್ರಾಮಿ, ಶಿವಲಿಂಗ ಸ್ವಾಮಿಗಳು ಖೇಳಗಿ, ಆನಂದ ಭಾರತಿ ಮಾತಾಜೀ ಶ್ರೀ ಶೈಲ. ಚನ್ನಬಸವ ಸ್ವಾಮಿಗಳು ನಿಡಗುಂದಿಕೊಪ್ಪ, ಚನ್ನಮಲ್ಲ ಸ್ವಾಮಿಗಳು ಕನಕಗಿರಿ, ಶಿವ ಹಂಸಾರೂಢ ಸ್ವಾಮಿಗಳು ಹೈದ್ರಾಬಾದ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ಮಠಾಧೀಶರು ಭಾಗವಹಿಸಿದ್ದರು.

ತೆಲಂಗಾಣ ಕೃಷಿ ಮಂತ್ರಿ ಸಿಂಗಾರೆಡ್ಡಿ ನಿರಂಜನರೆಡ್ಡಿ, ಮಖ್ತಲ್ ಶಾಸಕ ಚಿಟ್ಟೆಂ ರಾಮ ಮೋಹನರೆಡ್ಡಿ, ನಾರಾಯಣಪೇಟ್ ಶಾಸಕ ಎಸ್.ಆರ್ ರೆಡ್ಡಿ, ಸಂಸದ ಎಂ. ಶ್ರೀನಿವಾಸರೆಡ್ಡಿ, ಜಿಲ್ಲಾಧಿಕಾರಿ ಕೋಯಾ ಶ್ರೀ ಹರ್ಷ, ಯಾದಗಿರಿಯ ಮಹೇಶರೆಡ್ಡಿ ಮುದ್ನಾಳ, ಶರಣಗೌಡ ಬಾಡಿಯಾಳ, ಶರಣಪ್ಪಗೌಡ ರಾಯಚೂರ, ವಾಕಿಟಿ ಶ್ರೀಹರಿ, ರಾಜುಲ ಆಶೀರೆಡ್ಡಿ, ಪ್ರಶಾಂತರೆಡ್ಡಿ, ಶಿವರಾಜ ಪಾಟೀಲ್ ಗುರ್ಜಾಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಧರ್ಮಪ್ರಚಾರಕರು ಒಳಗೊಂಡಂತೆ ಸಹಸ್ರಾರು ಭಕ್ತ್ತರು ಪಾಲ್ಗೊಂಡಿದ್ದರು.

…………………………
ಕನ್ನಡದಲ್ಲಿ ಮಾತಾಡಿದ ತೆಲಂಗಾಣ ಸಚಿವ

ನೇರಡಗಂ ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಜ್ಞಾನದ ಸಂಕೇತವಾದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕರ್ನಾಟಕ-ತೆಲಂಗಾಣ ಗಡಿ ಭಾಗದ ಭಕ್ತರ ಅದೃಷ್ಟವಾಗಿದೆ. ಮಠ-ಮಂದಿರ ಹಾಗೂ ಪೂಜರಯ ಆಶಯದಂತೆ ಪ್ರತಿಯೊಬ್ಬರು ಸನ್ಮಾನರ್ಗದಲ್ಲಿ ನಡೆಯುವ ಮೂಲಕ ಮುಕ್ತಿ ಮಾರ್ಗದ ಕಡೆ ಸಾಗಬೇಕು ಎಂದು ತೆಲಂಗಾಣ ರಾಜ್ಯದ ಕೃಷಿ ಸಚಿವ ಸಿಂಗಾರೆಡ್ಡಿ ನಿರಂಜನರೆಡ್ಡಿ ಕನ್ನಡ ಭಾಷೆಯಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಬಹುತೇಕ ಕನ್ನಡಿಗರೇ ಪಾಲ್ಗೊಂಡಿದ್ದರು.