ಹಿರಿಯೂರು ಮಾ. 27 – ವಿಶ್ವಗುರು ಬಸವಣ್ಣನವರು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಜ್ಞಾನದ ಜ್ಯೋತಿಯನ್ನು ಹಚ್ಚಿದ್ದಾರೆ ವೈಚಾರಿಕತೆಯ ಸಮಾನತೆಯ ದೀಪ ಹಚ್ಚಿದ್ದಾರೆ ಅವರ ಸಂದೇಶಗಳು ಅಶಾಂತಿಯನ್ನು ನಿರ್ಮೂಲನೆ ಮಾಡಿ ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಮೂಡಿಸುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಪ್ರಭಾರಿ ಪೀಠಾಧ್ಯಕ್ಷರಾದ ಶ್ರೀ ಬಸವ ಪ್ರಭು ಮಹಾಸ್ವಾಮೀಜಿಯವರು ಹೇಳಿದರು. ಐಮಂಗಲ ಗ್ರಾಮದಲ್ಲಿ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠ ವತಿಯಿಂದ ಆಯೋಜಿಸಿದ್ದ ಮಹಾಶಿವಶರಣ ಹರಳಯ್ಯ ಸಂಸ್ಕೃತಿ ಉತ್ಸವ ಅಲ್ಲಮ ಪ್ರಭು ದೇವರ ಜಯಂತಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಮತ್ತು ವೀರಯೋಧರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇವನಾರವ ಇವನಾರವ ಎನ್ನದೆ ಇವ ನಮ್ಮ ಮನೆಯ ಮಗ ಎನ್ನುವ ಹಾಗೆ ನಾವೆಲ್ಲರೂ ಒಂದೇ ಎನ್ನುವ ಹಾಗೆ ಜಾತಿಯತೆಯನ್ನು ನಿರ್ಮೂಲನೆ ಮಾಡಿ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳಗಿಸಿದ್ದಾರೆ ಮಹಾ ಶಿವಶರಣ ಹರಳಯ್ಯನವರು ಸಹ ಇದನ್ನು ಅನುಸರಿಸಿದವರು ಎಂದು ಹೇಳಿದರು. ಗಂಗಾವತಿಯ ಪರಿವರ್ತನಾವಾದಿ ಚಿಂತಕರಾದ ಪ್ರೊ.ಲಿಂಗಣ್ಣ ಜಂಗಮರಳ್ಳಿ ಯವರು ಮಾತನಾಡಿ ಎಲ್ಲೂ ಇಲ್ಲದ ಜಾತಿಯನ್ನು ಭಾರತದಲ್ಲಿ ಕಾಣುತ್ತಿದ್ದೇವೆ ಭಾರತ ಜಾತಿಗಳನ್ನು ಬಿತ್ತಿದೆ ಇದು ತುಂಬಾ ಮಾರಕವಾದಂತಹ ಪದ್ಧತಿ, ಇದನ್ನು ತೊಲಗಿಸಲು ಬಸವಣ್ಣ ಅಂಬೇಡ್ಕರ್ ಮುಂತಾದ ಶರಣರು ಶ್ರಮಿಸಿದ್ದಾರೆ ಗುಲಾಮಗಿರಿಯನ್ನು ತೊಲಗಿಸಿ ಸೋದರತ್ವ ಭ್ರಾತೃತ್ವದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ದೇಶ ಉದ್ದಾರ ವಾಗಬಲ್ಲದು ಎಂದರು ಭಾರತದ ಪ್ರಗತಿ ಪಥವನ್ನು ನೋಡಿದಾಗ ದಲಿತರ ಶ್ರಮ ಸಾಕಷ್ಟು ಇದೆ ಎನ್ನುವುದನ್ನು ತಿಳಿಸಿದರು. ಐಮಂಗಲ ಗುರು ಪೀಠ ದ ಶ್ರೀ ಬಸವ ಹರಳಯ್ಯ ಮಹಾಸ್ವಾಮೀಜಿ, ಜಗಳೂರು ಗವಿಸಿದ್ದೇಶ್ವರ ಮಠದ ಶ್ರೀ ಬಸವ ಪ್ರಭು ಮಹಾಲಿಂಗ ಸ್ವಾಮೀಜಿ ಭಾಗವಹಿಸಿದ್ದರು. ಬೆಂಗಳೂರು ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಬಿಲ್ಲಪ್ಪನವರು ಮಹಾಶಿವ ಶರಣ ಹರಳಯ್ಯನವರು ಅಲ್ಲಮಪ್ರಭು ದೇವರು ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರಿ ಆಸ್ಪತ್ರೆಗೆ ಭೂದಾನ ಮಾಡಿದ ನೀರಗಂಠಿ ಮನೆತನದವರು ಮತ್ತು ವೀರಯೋಧರಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು. ಸಂಶೋಧಕರಾದ ಡಾ. ಸೋಮಕ್ಕ ಖ್ಯಾತ ಚಿಂತಕರು ಹಾಗೂ ವಕೀಲರಾದ ಹರಿರಾಮ್ ದಾವಣಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ಧನಂಜಯ, ಡಿಎಸ್ಎಸ್ ರಾಜ್ಯಾಧ್ಯಕ್ಷರಾದ ಗುರುಮೂರ್ತಿ ಚಿತ್ರದುರ್ಗದ ಮಾಜಿ ಅರೆಸೇನಾ ಯೋಧರ ಸಂಘದ ಜಿಲ್ಲಾಧ್ಯಕ್ಷರಾದ ಲಿಂಗರಾಜು, ಮಾಜಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವಿಜಯಕುಮಾರ್, ಪ್ರಗತಿಪರ ರೈತ ಮುಖಂಡರಾದ ದಯಾನಂದ ಮೂರ್ತಿ, ಗ್ರಾಂ.ಪಂ.ಅಧ್ಯಕ್ಷರಾದ ಕರಿಯಮ್ಮ, ರೈತ ಮುಖಂಡರಾದ ಕೆ ಸಿ ಹೊರಕೇರಪ್ಪ, ಪ್ರಾಂಶುಪಾಲರಾದ ಕಣ್ಮೇಶ್, ರವೀಂದ್ರನಾಥ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿರಿ ಮೆಲೋಡೀಸ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.