ಜ್ಞಾನದ ಕಣ್ಣಿನಿಂದ ಸಂವಿಧಾನ ನೋಡಿ:ಪ್ರೊ|| ಎನ್ ಚಿನ್ನಸ್ವಾಮಿ ಸೋಸಲೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ನ.28: ಬೆರಳೆಣಿಕೆಯಷ್ಟು ಜನರು ಸ್ವಾರ್ಥ ಸಾಧನೆಗಾಗಿ ಬಹು ಜನರ ಕಣ್ಣನ್ನು ಮುಚ್ಚಿಸಿದ್ದರು. ಜ್ಞಾನದ ಮೂಲಕ ಬಹುಜನರ ಕಣ್ಣನ್ನು ತೆರಿಸಿದ ಸಂದರ್ಭವೇ ಸಂವಿಧಾನ ಭಾರತಕ್ಕೆ ಸಮರ್ಪಣೆಯಾದ ದಿನ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ|| ಎನ್ ಚಿನ್ನಸ್ವಾಮಿ ಸೋಸಲೆ ಹೇಳಿದರು.
ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘವತಿಯಿಂದ ನಗರದ ಜೈ ಭೀಮ್ ವೃತ್ತದಲ್ಲಿ ಭಾನುವಾರ ಮಾತನಾಡಿದ ಅವರು, ಇಂತಹ ಸಂವಿಧಾನವನ್ನು ನಾವು ಕಣ್ಣಿಗೆ ಕಾಣದ ದೇವರನ್ನು  ಕಣ್ಣು ಮುಚ್ಚಿ ಭಕ್ತಿಯಿಂದ ಪೂಜಿಸುವ ಅಜ್ಞಾನದ ಮಾದರಿಯಲ್ಲಿ  ನೋಡಬಾರದು. ಬದಲಿಗೆ ತೆರೆದ ಕಣ್ಣಿನ ಸುಜ್ಞಾನದ ಮೂಲಕ ನೋಡಿ ಗ್ರಹಿಸಬೇಕಾಗಿದೆ. ಏಕೆಂದರೆ ಸಂವಿಧಾನ ಮಾತನಾಡುತ್ತದೆ, ಮಾತು ಕಲಿಸುತ್ತದೆ ಹಾಗೆಯೇ ಮುನ್ನಡೆಸುತ್ತದೆ. ಆದರೆ ನಾವು ಮಾತ್ರ ಈ ಜನಮುಖಿ ಸಂವಿಧಾನವನ್ನು ಮಾತನಾಡಿಸಲು ಹೋಗುತ್ತಿಲ್ಲ. ಬದಲಿಗೆ ಇನ್ನೂ ಸಹ ನಮ್ಮ ಕಣ್ಣು ಮುಚ್ಚಿಕೊಂಡೇ ದೇವರ ಹೆಸರಿನ ಅಜ್ಞಾನದಿಂದ  ಮಾತನಾಡುತ್ತಿರುವ ಪುರಾಣದ ಸಂವಿಧಾನವನ್ನೇ  ಮಾತನಾಡಿಸಲು ಹಂಬಲಿಸುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಂವಿಧಾನಾತ್ಮಕ ದುರಂತ ಎಂದರು.
ಜ್ಞಾನದ ಪಾರಂಪರಿಕ ಶಿಕ್ಷಣವನ್ನೇ ಮೈಗೂಡಿಸಿಕೊಂಡಿರುವ ಕಾರಣಕ್ಕಾಗಿ ಏನೇ ಶಿಕ್ಷಣ ಪಡೆದರೂ ಸಹ ಸಂವಿಧಾನಾತ್ಮಕವಾಗಿ ಪ್ರಬುದ್ಧತೆಯ ಶಿಕ್ಷಣವಂತರಾಗುತ್ತಿಲ್ಲ. ಇದು ಬಹುಜನರ  ಬಹುದೊಡ್ಡ ತೊಡಕಾಗಿದೆ. ಇದರಿಂದಾಗಿ ಸಂಘಟನೆಗಳು ಗಟ್ಟಿಯಾಗುತ್ತಿಲ್ಲ, ಈ ಹಿನ್ನೆಲೆಯ ಹೋರಾಟಗಳೂ ಫಲ ಕೊಡುತ್ತಿಲ್ಲ ಎಂದರು.
ಪ್ರಗತಿಪರ ಚಿಂತಕ ಜಂಬಯ್ಯ ನಾಯಕ ಮಾತನಾಡಿ, ಬಾಬಾ ಸಾಹೇಬರು ಭಾರತಕ್ಕಾಗಿ ಅರ್ಪಿಸಿದ ಈ ಸಂವಿಧಾನವೇ  ನಮ್ಮೆಲ್ಲರ ಒಡಲು ಹಾಗೂ ಜೀವ ಎಂದು ಹೇಳಿದರು. ವಿಜಯನಗರ ಜಿಲ್ಲೆ  ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್   ಸಂಘದ ಪ್ರಧಾನ ಕಾರ್ಯಧರ್ಶಿ ಸೋಮಶೇಖರ್ ಬಣ್ಣದಮನೆ ಸಂವಿಧಾನದ ಪೀಠಿಕೆ ಬೋಧಿಸಿದರು. ಜೆ ಶಿವಕುಮಾರ್, ಬಿ ಹನುಮಂತಪ್ಪ, ರಾಮಚಂದ್ರ ಬಾಬು, ಸಣ್ಣ ಮಾರೆಪ್ಪ, ಡಿ ವೆಂಕಟರಮಣ, ಬಿ ಚಂದ್ರಶೇಖರ್, ಕಾರಿಗೆನೂರ್ ರಾಮಕೃಷ್ಣ, ಸಿ ಗೊವಿಂದರಾಜ್, ರಫೀಕ್, ಕಟಿಗಿ ಇರ್ಫಾನ್, ಸಜ್ಜಾದ್ ಖಾನ್, ಸಿ ನೀಲಕಂಟ, ಜೆ ಸಿ ಈರಣ್ಣ, ಸಿ ರಾಜ, ಸಿ ರಾಮಚಂದ್ರ, ತಾಯಪ್ಪ ನಾಯಕ, ಶ್ರೀಮತಿ ಅಂಜಲಿ ಬೆಳಗಲ್, ತಮಾನಳೆಪ್ಪ , ಸಿ ರಮೇಶ್ ಹಾಗೂ ಚಂದ್ರ ಮೋಹನ್ ಇತರರು ಇದ್ದರು.