ಜ್ಞಾನದಿಂದ ಮಾತ್ರ ವ್ಯಕ್ತಿತ್ವ ನಿರ್ಮಾಣ : ಡಾ.ಗಣಪತಿ ಸಿನ್ನೂರ

ಜೇವರ್ಗಿ : ಆ.5:ಬಸವಾದಿ ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಚಾರಿತ್ರಿಕ ವ್ಯಕ್ತಿತ್ವದ ಜತೆಗೆ ಆರೋಗ್ಯಕರ ಸಮಾಜ ನಿರ್ಮಿಸಬಹುದು ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರ ಅಭಿಪ್ರಾಯಪಟ್ಟರು.

ಪಟ್ಟಣದ ಜಗದ್ಗುರು ಶ್ರೀತೋಂಟದಾರ್ಯ ವಿದ್ಯಾಪೀಠದ ಶ್ರೀಬಸವೇಶ್ವರ ಬಿಎಡ್ ಕಾಲೇಜಿನಲ್ಲಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣಸಂಗಮ ಕಾರ್ಯಕ್ರಮದಲ್ಲಿ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಅನುಭಾವ ನೀಡಿದರು. ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ವಚನಗಳು ಪ್ರೇರಣಾದಾಯಕವಾಗಿವೆ. ಅರಿವು, ಅಕ್ಷರ, ಅನುಸಂಧಾನದ ಮೂಲಕ ಅನುಭವ ಮಂಟಪವನ್ನು ಶರಣರು ಕಟ್ಟಿದರು. ವಚನಗಳಲ್ಲಿ ಸಾಹಿತ್ಯ, ಸಮಾಜ ವಿಜ್ಞಾನ, ಮನಃಶಾಸ್ತ್ರ, ರಾಜಕೀಯ ನೀತಿ, ಅರ್ಥಶಾಸ್ತ್ರದ ಜತೆಗೆ ಬದುಕುವ ಕಲೆ ಅಡಗಿದೆ. ಬದುಕಿನಲ್ಲಿ ಸುಂದರ ಹಾಗೂ ಚಾರಿತ್ರಿಕ ವ್ಯಕ್ತಿತ್ವ ಹೊಂದಲು ಶರಣರ ವಚನಗಳು ಪೂರಕವಾಗಿವೆ ಎಂದರು.

ಬದುಕಿನ ಮೌಲ್ಯಗಳನ್ನು ಜ್ಞಾನ ಸಂಪಾದನೆಯಿಂದ ಪಡೆದುಕೊಳ್ಳಬೇಕು. ಜ್ಞಾನಕ್ಕೆ ಸಿಗುವ ಗೌರವ ಬೇರಾವುದಕ್ಕೂ ಸಿಗುವುದಿಲ್ಲ. ಜ್ಞಾನದಿಂದ ಮಾತ್ರ ವ್ಯಕ್ತಿತ್ವ ನಿರ್ಮಾಣಗಳ್ಳಲಿದೆ. ವಚನ ಸಾಹಿತ್ಯಕ್ಕಿಂತ ಮತ್ತೊಂದು ಪವರ್‍ಫುಲ್ ಮತ್ತೊಂದು ಈ ಜಗತ್ತಿನಲ್ಲಿ ಬೇರೇನಿಲ್ಲ ಎಂದು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿ ಉಪಾದ್ಯಕ್ಷ ಶಿವಣಗೌಡ ಪಾಟೀಲ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸವಕೇಂದ್ರ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಬಿಎಡ್ ಕಾಲೇಜಿನ ಉಪನ್ಯಾಸಕ ಶಿವಸಾಯಿ ಮಮದಾಪೂರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವಿಶ್ವಾಸ ಸಿಂಧೆ, ಮಹಾಂತಪ್ಪ ಸಾಹು ಹರವಾಳ, ಕಂಠೆಪ್ಪ ಹರವಾಳ, ಮಲ್ಕಣಗೌಡ ಹೆಗ್ಗಿನಾಳ, ಈರಣ್ಣ ಭೂತಪೂರ, ಸಾಹೇಬಗೌಡ ಪಾಟೀಲ ಹರನೂರ, ಶರಣು ನಾಗರವತ್, ಸಂಗಮೇಶ ಹಿರೇಮಠ, ಮಲ್ಲಾರೆಡ್ಡಿ ಮಲ್ಲಾ, ಶ್ರೀಕಾಂತ ಕುಲಕರ್ಣಿ, ದೇವಿಂದ್ರ ಸೊನ್ನ, ನೀಲಮ್ಮನ ಬಳಗದ ಅಧ್ಯಕ್ಷ ಮಹಾನಂದ ಹುಗ್ಗಿ, ಬಸವಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಹಣಮಂತ್ರಾಯ ಗಾಣಿಗೇರ, ರೂಪಾ, ಪ್ರಕೃತಿ, ಶ್ರುತಿ, ನಂದಾ, ಭಾಗಣ್ಣ, ಅನೀಲ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.