ಜ್ಞಾನದಿಂದ ಆತ್ಮವಿಶ್ವಾಸ ವೃದ್ದಿ

ದಾವಣಗೆರೆ.ಜ.೧೨; ಜ್ಞಾನವೇ ನಿಜವಾದ ಆಸ್ತಿ” “ಜ್ಞಾನದಿಂದ ಆತ್ಮವಿಶ್ವಾಸ ವೃದ್ದಿ”, ಉನ್ನತ ಸಾಧನೆಗಳಿಗೆ ಯಾವುದೇ ಶಾರ್ಟ್ಕಟ್ ದಾರಿಗಳು ಇರುವುದಿಲ್ಲಾ, ಜ್ಞಾನದಿಂದ ಆತ್ಮವಿಶ್ವಾಸ ವೃದ್ದಿಸುತ್ತದೆ. ಯುವಜನರು ಜ್ಞಾನದ ಬೆನ್ನತ್ತಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ  ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ವಿನರ್ಸ್ ಸಮೂಹ ಸಂಸ್ಥೆ ವತಿಯಿಂದ ನೂತನವಾಗಿ ಪ್ರಾರಂಭಿಸಿರುವ ವಿನರ್ಸ್ ಡಿಜಿಟಲ್ ಲೈಬ್ರರಿಯ ಉದ್ಘಾಟಿಸಿ, ಮಾತನಾಡಿದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಮುಖ್ಯ. ಪುಸ್ತಕ ಓದುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ, ಮಂಜುನಾಥ್ ಎನ್.ಟಿ. ರವರು “ಶಿಸ್ತು ಯಶಸ್ಸಿನ ಸಹಕಾರಿ”. ಸರ್ಕಾರಿ ಹುದ್ದೆಗೆ ಆಯ್ಕೆಯಾದ ಮೇಲೆ ಪೋಷಕರನ್ನು ಪೋಷಿಸುವ ಸಂಸ್ಕಾರವನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಅಭಿಯಂತರರಾದ ಹೆಚ್.ವಿ. ಮಂಜುನಾಥ್ ರವರು “ಜ್ಞಾನವಿದ್ದವರೇ ನಿಜವಾದ ಶ್ರೀಮಂತರು”. ಜ್ಞಾನ ಇದ್ದಲ್ಲಿ ಬಲ ಇರುತ್ತದೆ, ಶ್ರಮ ಇದ್ದಲ್ಲಿ ಫಲ ಇರುತ್ತದೆ ಎಂದರು. ಮಹಾನಗರಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್ ರವರು ಗ್ರಂಥಾಲಯವನ್ನು ಪ್ರೀತಿಸುವ, ಪುಸ್ತಕಗಳನ್ನು  ಓದುವ ಕೌಶಲ್ಯ ಜೀವನದಲ್ಲಿ ರೂಢಿಸಿಕೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ತಜ್ಞರಾದ ಡಾ. ಹೆಚ್.ವಿ. ವಾಮದೇವಪ್ಪ ನವರು ಯಶಸ್ವಿ 12 ವರ್ಷ ನಿರಂತರವಾಗಿ ನಡೆಯುತ್ತಿರುವ ಸಂಸ್ಥೆಯ ಬಗ್ಗೆ ಶ್ಲಾಘಿಸಿದರು. ಯಶಸ್ವಿಗೆ ಸತತ ಪ್ರಯತ್ನ, ಶಿಸ್ತು, ಆತ್ಮವಿಶ್ವಾಸ, ಮಾನಸಿಕ ಆರೋಗ್ಯ ಮುಖ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕೆ.ಎ.ಎಸ್ ಸಾಧಕರಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರಪ್ಪ ಕೆ.ಆರ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಡಾ. ಶಿವರಾಜ್ ಕಬ್ಬೂರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರದೀಪ್ ಕುಮಾರ್ ಜೆ.ಪಿ ವಂದಿಸಿದರು. ಉಪನ್ಯಾಸಕರಾದ ಮರುಳಸಿದ್ದಪ್ಪ ಎನ್.ಟಿ ನಿರೂಪಣೆ ಮಾಡಿದರು.     ರಮ್ಯಾ ಪ್ರಾರ್ಥಿಸಿದರು. ಸಂಸ್ಥೆಯ ಅಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳ ಬಳಗ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದ ಹಾಜರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.