ಜ್ಞಾನಗಂಗಾ ಘಟಿಕೋತ್ಸವ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕಲಬುರಗಿ,ಜೂ 19: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ವಿವಿಯ 41ನೇ ಘಟಿಕೋತ್ಸವ ಅದ್ಧೂರಿಯಾಗಿ ನೆರವೇರಿತು.
ಕುಲಾಧಿಪತಿ ಹಾಗೂರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ವಿವಿಯ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಮಾತನಾಡುತ್ತಾ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ. ಆ ದಿಕ್ಕಿನಲ್ಲಿ ಬದ್ಧತೆಯಿಂದ ಹೆಜ್ಜೆ ಇಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರಕಾರಿ ವಿಶ್ವವಿದ್ಯಾಲಯಗಳು ಖಾಸಗಿ ವಿವಿಗಳ ಎದುರು ಶೈಕ್ಷಣಿಕ ಗುಣಮಟ್ಟದ ವಿಷಯದಲ್ಲಿ ಗಣನೀಯ ಬದಲಾವಣೆಗಳನ್ನು ತಂದುಕೊಳ್ಳುವ ಅಗತ್ಯವಿದೆ. ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯತತ್ಪರವಾಗಿದೆ ಎಂದರು.
ಇದಕ್ಕೂ ಮುನ್ನ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಶ್ರೀವಾರಿ ಚಂದ್ರಶೇಖರ ಘಟಿಕೋತ್ಸವದಲ್ಲಿ ವರ್ಚುವಲ್ ಘಟಿಕೋತ್ಸವ ಭಾಷಣ ಪ್ರಸ್ತುತಪಡಿಸುತ್ತಾ, ವಿದ್ಯಾರ್ಥಿಗಳು ಕ್ರಮಬದ್ಧತೆ ಹಾಗೂ ಧೈರ್ಯ ಪ್ರದರ್ಶನದಿಂದ ಮಾತ್ರ ಅದ್ಭುತ ಸಾಧನೆಗಳು ಕೈಗೂಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುಂಚೆ 2021-22ನೇ ಸಾಲಿನಲ್ಲಿ ಉತ್ತೀರ್ಣರಾದ 72 ವಿದ್ಯಾರ್ಥಿಗಳಿಗೆ ಒಟ್ಟು 165 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಈ ಪೈಕಿ 58 ವಿದ್ಯಾರ್ಥಿನಿಯರು ಹಾಗೂ 18 ವಿದ್ಯಾರ್ಥಿಗಳು ಪದಕಗಳನ್ನು ಪಡೆದುಕೊಂಡರು.
ಇದೇವೇಳೆ, ವಿವಿಧ ನಿಕಾಯಗಳ ಒಟ್ಟು 129 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.
ಈ ಪೈಕಿ ಕಲಾ ನಿಕಾಯದಲ್ಲಿ 35, ಸಮಾಜ ವಿಜ್ಞಾನ ನಿಕಾಯದಲ್ಲಿ 44, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 31, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಲ್ಲಿ 12, ಶಿಕ್ಷಣ ನಿಕಾಯದಲ್ಲಿ 4 ಹಾಗೂ ಕಾನೂನು ನಿಕಾಯದಲ್ಲಿ 3 ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ವಿಶ್ವವಿದ್ಯಾಲಯದ ಉಪಕುಲಪತಿ ಇಡೀ ಘಟಿಕೋತ್ಸವ ನಿರ್ವಹಿಸಿದರು.
ಕುಲಸಚಿವ ಡಾ.ಶರಣಪ್ಪ ಸತ್ಯಂಪೇಟೆ, ಮೌಲ್ಯಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ್, ಪೆÇ್ರ.ಲಕ್ಷ್ಮಣ ರಾಜನಾಳಕರ್ ಸೇರಿದಂತೆ ವಿವಿಧ ನಿಕಾಯಗಳ ಮುಖ್ಯಸ್ಥರು, ಡೀನರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೆÇೀಷಕರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.


ರುಕ್ಮಿಣಿಗೆ 14 ಚಿನ್ನದ ಪದಕ
ಗುಲ್ಬರ್ಗ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು 14 ಚಿನ್ನದ ಪದಕಗಳನ್ನು ಪಡೆದ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ, 9 ಚಿನ್ನದ ಪದಕಗಳನ್ನು ಪಡೆದ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅದಿತಿ ರೆಡ್ಡಿ ಸಂಜೀವ್ ರೆಡ್ಡಿ ಮೊಡಸೆ, 8 ಚಿನ್ನದ ಪದಕಗಳನ್ನು ಪಡೆದ ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ವೀರಭದ್ರಪ್ಪ ಗಾದಗಿಕರ್, 7 ಚಿನ್ನದ ಪದಕಗಳನ್ನು ಪಡೆದ
ಸೂಕ್ಷ್ಮ ಜೀವಶಾಸ್ತ್ರವಿಭಾಗದ ಬಿ.ರಾಜಶ್ರೀ ಪಿ.ಜೋಶಿ ಅವರನ್ನು ರಾಜ್ಯಪಾಲರು ಪದಕಗಳನ್ನು ನೀಡಿ ಗೌರವಿಸಿದರು.
ಇದರ ಜೊತೆಗೆ, ರಾಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ಲಕ್ಷ್ಮಣ ಹಾಗೂ ಸಮಾಜ ಕಾರ್ಯ ವಿಭಾಗದ ಅಂಬಿಕಾ ಶಿವಾನಂದ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಅಮೀನಾ ಅಂಜುಂ ಅವರು ತಲಾ 6 ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ಜೊತೆಗೆ, ರಸಾಯನಶಾಸ್ತ್ರ ವಿಭಾಗದ ಶ್ರಾವಣಿ ಕೃಷ್ಣಾರೆಡ್ಡಿ, ಜೀವರಸಾಯನಶಾಸ್ರ್ತ ವಿಭಾಗದ ಅಕ್ಕಮಹಾದೇವಿ ಹಾಗೂ ಕಲಬುರಗಿಯ ಗುರುಕುಲ ಪದವಿ ಮಹಾವಿದ್ಯಾಲಯದ ಬಿಕಾಂ ವಿದ್ಯಾರ್ಥಿನಿ ಭಾಗ್ಯವಂತಿ ತಲಾ 5 ಚಿನ್ನದ ಪದಕಗಳನ್ನು ಸ್ವೀಕರಿಸಿದರು.


ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಗುಲ್ಬರ್ಗ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳ ಮೂವರು ತಜ್ಞರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
ಶಿಲ್ಪಕಲಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲಬುರಗಿ ಜಿಲ್ಲೆಯ ಮಾನಯ್ಯ ನಾಗಣ್ಣ ಬಡಿಗೇರ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಬೀದರ್ ಜಿಲ್ಲೆಯ ತಾತ್ಯಾರಾವ್ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವ ಬೆಂಗಳೂರಿನ ಮರ್ಕ್ ಸಂಸ್ಥೆಯ ಶ್ರೀನಾಥ್ ಎನ್.ಎಸ್. ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.


ಗೊಂದಲ ಸೃಷ್ಟಿಸಿದ ರಾಜ್ಯಪಾಲರ ಭಾಷಣ
ಗುಲ್ಬರ್ಗ ವಿವಿಯ 41ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದಲ್ಲಿ ಕಳೆದ ವರ್ಷದ (40ನೇ) ಘಟಿಕೋತ್ಸವದ ಹಳೆಯ ಭಾಷಣವನ್ನೇ ಓದುವ ಮೂಲಕ ಅಚ್ಚರಿ ಮೂಡಿಸಿದರು.
ವಿವಿ ಅಧಿಕಾರಿಗಳು ರಾಜ್ಯಪಾಲರಿಗೆ ಕಳೆದ ವರ್ಷದ ಘಟಿಕೋತ್ಸವದ ಮುದ್ರಿತ ಭಾಷಣದ ಪ್ರತಿಯನ್ನು ಒದಗಿಸಿದ್ದರಿಂದ ರಾಜ್ಯಪಾಲರು ಅದೇ ಹಳೆಯ ಭಾಷಣ ಓದಿದರು. ಮತ್ತೊಂದೆಡೆ, ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಸಕ್ತ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದ ಗಣ್ಯರ ಹೆಸರಿನ ಬದಲು ಕಳೆದ ವರ್ಷದ ಗೌರವ ಡಾಕ್ಟರೇಟ್ ಪಡೆದವರ ಹೆಸರನ್ನೇ ಪ್ರಸ್ತಾಪಿಸಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.