ಜೋ ಬಿಡೆನ್‌ಗೆ ಮೋದಿ ಅಭಿನಂದನೆ

ನವದೆಹಲಿ, ನ. ೮- ಭಾರತ – ಅಮೆರಿಕ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ಒಗ್ಗೂಡಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಶುಭ ಹಾರೈಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ತಮಗೆ (ಜೋ ಬಿಡೆನ್) ಹಾಗೂ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಭಾರತ ಮತ್ತು ಅಮೆರಿಕದ ಸ್ನೇಹ ಸಂಬಂಧವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ. ಇದಕ್ಕಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದು ಟ್ಬೀಟ್ ನಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ನೇಮಕವಾಗಲಿರುವ ಕಮಲಾ ಹ್ಯಾರೀಸ್ ಅವರ ಈ ಸಾಧನೆ ಅಮೆರಿಕದಲ್ಲಿರುವ ಭಾರತೀಯರಷ್ಟೆ ಅಲ್ಲ, ಭಾರತದಲ್ಲಿರುವ ಜನರಿಗೂ ಹರ್ಷವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
೧೯೮೮ ಮತ್ತು ೨೦೦೮ ರಲ್ಲಿ ಅಮೆರಿಕಾದ ಅಧ್ಯಕ್ಷರಾಗಲು ಎರಡು ಬಾರಿ ಜೋ ಬಿಡೆನ್ ಪ್ರಯತ್ನಪಟ್ಟು ವಿಫಲರಾಗಿದ್ದರು. ಮೂರನೇ ಬಾರಿ ಯಶಸ್ಸು ಕಂಡಿರುವ ತಮಗೆ ಭವಿಷ್ಯದಲ್ಲಿ ಮತ್ತಷ್ಟು ಒಳಿತಾಗಲಿ ಎಂದು ಹೇಳಿದ್ದಾರೆ.