ಜೋಹರ್ ತಬ್ಬಿಕೊಂಡ ಪ್ರಿಯಾಂಕಾ

ಮುಂಬೈ, ಏ. ೧- ಇತ್ತೀಚೆಗೆ ಬಾಲಿವುಡ್ ಬಿಟ್ಟು ಹೋಗಿದ್ದೇಕೆ ಎಂದು ಬಹಿರಂಗಪಡಿಸಿದ್ದ ಹಾಲಿವುಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೆ ನಿರ್ಮಾಪಕ ಕರಣ್ ಜೋಹರ್ ಅವರನ್ನು ತಬ್ಬಿಕೊಂಡು ಸುದ್ದಿ ಮಾಡಿದ್ದಾರೆ.
ಹೌದು ಇತ್ತೀಚೆಗೆ ಬಾಲಿವುಡ್ ವಿರುದ್ಧ ಗುಡುಗಿದ ಬೆನ್ನಲ್ಲೇ ನಟಿ ಪ್ರಿಯಾಂಕಾ ಚೋಪ್ರಾ ನಿರ್ಮಾಪಕ ಕರಣ್ ಜೋಹರ್ ತಬ್ಬಿ ಅಭಿನಂದಿಸಿರುವ ವಿಡಿಯೋ ವೈರಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹೋಗಿದ್ದೇಕೆ ಎಂದು ಬಹಿರಂಗ ಪಡಿಸಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ಪ್ರಿಯಾಂಕಾ ಹೇಳಿಕೆಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿತ್ತು.
ಸೃಜನ ಪಕ್ಷಪಾತದ ಬಗ್ಗೆ ಮಾತನಾಡಿದ್ದರು. ಪ್ರಿಯಾಂಕಾ ಚೋಪ್ರಾ ಹೇಳಿಕೆಯನ್ನು ಬೆಂಬಲಿಸಿ ನಟಿ ಕಂಗನಾ ರಣಾವತ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ದೊಡ್ಡ ಮಟ್ಟದ ಸಂಚಲನ ಮೂಡಿಸಿದ ಬೆನ್ನಲ್ಲೇ ನಟಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಮರಳಿದ್ದಾರೆ.

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಡೀ ಬಾಲಿವುಡ್ ಭಾಗಿಯಾಗಿತ್ತು. ಸಮಾರಂಭಕ್ಕೆಂದು ಪ್ರಿಯಾಂಕಾ ಅಮೆರಿಕಾದಿಂದ ಪತಿ ನಿಕ್ ಜೋನಸ್ ಜೊತೆ ಮರಳಿದ್ದರು. ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಜೊತೆ ಭಾರತಕ್ಕೆ ಬಂದಿಳಿದ್ದಾರೆ. ಸಮಾರಂಭದಲ್ಲಿ ಪ್ರಿಯಾಂಕಾ ನಿರ್ಮಾಪಕ ಕರಣ್ ಜೋಹರ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದರು.

ಅಂದಹಾಗೆ ಪ್ರಿಯಾಂಕಾ ಬಾಲಿವುಡ್ ಬಿಡಲು ಕಾರಣ ಕರಣ್ ಜೋಹರ್ ಎಂದು ಹೇಳಲಾಗುತ್ತಿದೆ. ಕರಣ್ ಬ್ಯಾನ್ ಮಾಡಿದ ಕಾರಣ ಪ್ರಿಯಾಂಕಾ ಭಾರತ ಬಿಟ್ಟು ಹೋಗಿದ್ದು ಎನ್ನುವ ಮಾತು ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ಪ್ರಿಯಾಂಕಾ ಮತ್ತು ಕರಣ್ ಒಟ್ಟಿಗೆ ಕಾಣಿಸಿಕೊಂಡಿರುವುದು ಬಾಲಿವುಡ್ ಮಂದಿಯ ಹುಬ್ಬೇರುವಂತೆ ಮಾಡಿದೆ.

ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಇಬ್ಬರೂ ಮಾತನಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಕರಣ್ ನಟ ರಣ್ವೀರ್ ಸಿಂಗ್ ಜೊತೆ ಮಾತನಾಡುತ್ತಿದ್ದರು. ಆಗ ಪ್ರಿಯಾಂಕಾ ಅವರನ್ನು ನೋಡಿ ಹಗ್ ಮಾಡಿ ಮಾತನಾಡಿದರು. ಬಳಿಕ ಪ್ರಿಯಾಂಕಾ ಪತಿ ನಿಕ್ ಜೋನಸ್ ಅವರನ್ನು ಹಗ್ ಮಾಡುವುದನ್ನು ಕಾಣಬಹುದು.