ಜೋಶಿಯವರ ಸೋಲೇ ನಮ್ಮ ಗುರಿ: ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ, ಮಾ 31: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ದಮನಕಾರಿ ಆಡಳಿತ ನಡೆಯುತ್ತಿದ್ದು, ಅವರನ್ನು ಸೋಲಿಸುವುದೇ ಈ ಮುಂದೆ ನಮ್ಮ ಗುರಿ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ ಘೋಷಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 31 ರೊಳಗೆ ಜೋಶಿಯವರನ್ನು ಈ ಕ್ಷೇತ್ರದಿಂದ ಬೇರೆಡೆ ಬದಲಾವಣೆ ಮಾಡಬೇಕೆಂದು ಕೊಟ್ಟ ಸಮಯ ಮುಗಿದಿದ್ದು, ಇದೀಗ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಜೋಶಿಯವರ ಬದಲಾವಣೆಗೆ ಪಟ್ಟು ಹಿಡಿದ ಬಳಿಕ ಬಹುಸಂಖ್ಯಾತ ನಾಯಕರಿಂದ ದೂರವಾಣಿ ಮೂಲಕ ಮನವೊಲಿಕೆ ಪ್ರಯತ್ನ ನಡೆದಿದೆ. ಅದಕ್ಕೆ ಜಗ್ಗದಿದ್ದಾಗ ಬೆದರಿಕೆ ಕರೆಗಳು ಬಂದಿವೆ ಎಂದ ಅವರು, ಕೇಂದ್ರ ಸಚಿವರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಲು ತಮ್ಮ ಪ್ರಾಣ, ಮಾನ ಹೋದರೂ ನಿಲುವು ಬದಲಾವಣೆ ಆಗದು. ಯಾವುದೇ ಒತ್ತಡಕ್ಕೂ ತಾವು ಒಳಗಾಗುವುದಿಲ್ಲ ಎಂದು ಅವರು ಹೇಳಿದರು.

ಸಭೆ: ಮುಂದಿನ ಕ್ರಮದ ನಿರ್ಧಾರದ ಕುರಿತು ಚರ್ಚೆ ನಡೆಸಲು ಧಾರವಾಡದಲ್ಲಿ ಏಪ್ರಿಲ್ 2 ರಂದು ಭಕ್ತರ ಸಭೆಯನ್ನು ಕರೆದಿರುವುದಾಗಿಯೂ ಅವರು ತಿಳಿಸಿದರು.

ಬಾಕ್ಸ್:
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅವರ ಬದಲಾವಣೆ ಮಾಡಬೇಕು ಎಂದು ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳು ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿದ್ದರು. ಬಿಜೆಪಿ ಹೈಕಮಾಂಡ ಮಾ.31 ರೊಳಗೆ ಜೋಶಿ ಅವರನ್ನು ಬೇರೆಡೆ ಬದಲಾವಣೆ ಮಾಡಬೇಕು ಎಂದು ಹೇಳಿದ್ದರು. ಇಂದು ಮತ್ತೆ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಏ.2 ರಂದು ಭಕ್ತರ ಸಭೆ ಕರೆದು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.