ಜೋಳ ಮಾರಿದ ರೈತರ ಗೋಳಾಟ: ಹಣಸಂದಾಯದ ಭರವಸೆ

ಚಂದ್ರಶೇಖರ ಮದ್ಲಾಪೂರು
ಮಾನ್ವಿ,ಮೇ.೨೩- ರಾಯಚೂರು ಜಿಲ್ಲೆಯ ಜೋಳ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ ರೈತರಿಗೆ ಮೇ ಅಂತ್ಯದೊಳಗೆ ಒಟ್ಟು ೨೬ ಕೋಟಿ ಹಣ ಸಂದಾಯವಾಗಲಿದ್ದು, ರೈತರು ಇದಕ್ಕೆ ಸಹಕಾರ ಮಾಡುವಂತೆ ಅಧಿಕಾರಿ ಜಿಕೆ ವೆಂಕಟೇಶ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿರುವ ಜೋಳ ಕಳೆದ ಎರಡು ತಿಂಗಳಿಂದಲೂ ಹಣ ಸಂದಾಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಜೋಳ ಬೆಳೆಯಲು ಉತ್ತೇಜಿಸಿ ಬೆಂಬಲ ಬೆಲೆಯಡಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿ ವರ್ಷ ಜೋಳ ಖರೀದಿ ಮಾಡುತ್ತಿದೆ. ಆದರೆ, ಈ ಬಾರಿ ಜೋಳ ಖರೀದಿ ಹಣವನ್ನು ರೈತರ ಖಾತೆಗೆ ಜಮೆ ಮಾಡದೇ ಇರುವುದರಿಂದ ಹಣಕ್ಕಾಗಿ ಪ್ರತಿ ದಿನ ರೈತರು ಕಚೇರಿಗೆ ಅಲೆಯುವಂತಾಗಿದೆ ರಾಯಚೂರು ಜಿಲ್ಲೆಯಲ್ಲಿರುವ ಎಲ್ಲ ಜೋಳ ಖರೀದಿ ಕೇಂದ್ರದಲ್ಲಿ ಒಟ್ಟು ೨೬ ಕೋಟಿಯಷ್ಟು ಹಣ ಸಂದಾಯವಾಗಬೇಕಿದೆ. ಈಗಾಗಲೇ ರಾಯಚೂರು ಜಿಲ್ಲೆಗೆ ೧೪೨ ಕೋಟಿ ಹಣ ರೈತರಿಗೆ ಸಂದಾಯವಾಗಿದ್ದು ಇನ್ನುಳಿದ ಮೊತ್ತ ಈ ವಾರದಲ್ಲಿ ಬರಬೇಕಾಗಿದೆ ಎಂದರು.
ಸರ್ಕಾರದಿಂದ ಹಣ ಬಂದಿಲ್ಲ: ನೇರವಾಗಿ ರೈತರ ಖಾತೆಗೆ ಹಣ ಸಂದಾಯವಾಗಬೇಕಿದ್ದು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದು ಇಷ್ಟೆಲ್ಲಾ ಸಂಕಷ್ಟಕ್ಕೆ ಕಾರಣವಾಗಿದೆ. ೨೦೨೩ರ ಮಾ.೧೫ರವರೆಗೆ ಆನ್‌ಲೈನ್ ನೋಂದಣಿ ಮಾಡಿಸಿ ಜೋಳ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿದ್ದು, ನಂತರ ಮಾರಾಟ ಮಾಡಿದ ಯಾವುದೇ ರೈತರಿಗೆ ಹಣ ಬಿಡುಗಡೆಯಾಗಿಲ್ಲ ಎನ್ನುವುದು ಕೆಎಸ್‌ಎ?ಸಿ ಅಧಿಕಾರಿಗಳ ಸಮಜಾಯಿಷಿ. ಸರ್ಕಾರ ಪ್ರತಿ ಕ್ವಿಂಟಾಲ್ ಜೋಳ ಬೆಂಬಲ ಬೆಲೆಯಡಿ ೨೯೭೦ ರೂ.ಗಳಿಗೆ ಖರೀದಿ ಮಾಡಿದ್ದು.
ನಮಗೆ ಹಣ ನೀಡಿ: ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸುವ ಸಲುವಾಗಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಜೋಳ ಮಾರಾಟ ಮಾಡಿ ಮೂರ್ನಾಲ್ಕು ತಿಂಗಳುಗಳು ಕಳೆದರೂ ಹಣ ಸಿಗದಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಹಣಕ್ಕಾಗಿ ಕಾದು ಕುಳಿತ ಅನ್ನದಾತರು : ಜಿಲ್ಲೆಯ ಸುಮಾರು ೫೦೦ಕ್ಕೂ ಹೆಚ್ಚು ರೈತರಿಗೆ ಹಣ ಸಂದಾಯವಾಗಿಲ್ಲ ಎನ್ನಲಾಗಿದೆ. ಮಾ.೧೫ರ ನಂತರ ಜೋಳ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿಲ್ಲ. ಬಹುತೇಕ ರೈತರು ಈ ಹಣಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಪೂರ್ವ ಮುಂಗಾರು ಆರಂಭಗೊಂಡಿದೆ ಮತ್ತು ಮುಂಗಾರು ಬೆಳೆಗಳಿಗೆ ಬೇಕಾದ ಬಿತ್ತನೆ ಬೀಜ ಖರೀದಿ, ಉಳುಮೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯವಿದೆ.

(ಬಾಕ್ಸ್ ಐಟಂ..)
ಪ್ರತಿಭಟನೆ ಹಾದಿ: ಜಿಲ್ಲೆಯಲ್ಲಿ ರೈತರು ಜೋಳ ಖರೀದಿ ಹಣಕ್ಕಾಗಿ ಕಚೇರಿ ಅಲೆಯುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಇದರ ಬಗ್ಗೆ ಅಧಿಕಾರಿಗಳಿಗೆ ಅರಿವಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದು, ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ.
ಇನ್ನು ಎರಡು-ಮೂರು ದಿನಗಳಲ್ಲಿ ಜೋಳ ಖರೀದಿ ಹಣ ಜಮಾ ಆಗದಿದ್ದರೆ ಖರೀದಿ ಕೇಂದ್ರಗಳ ಮುಂದೆ ಪ್ರತಿಭಟನೆ ಮಾಡಲಾಗುವುದು.

ದೇವರಾಜ ದೇವಿಪುರ