ಜೋಳದರಾಶಿ ದೊಡ್ಡನಗೌಡ ರಂಗ ಜ್ಯೋತಿ ಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.28: ಗಮಕ ಕಲಾನಿಧಿ, ಪ್ರವಚನ ಶಿರೋಮಣಿ, ನಟ, ನಾಟಕಕಾರ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡರ 113ನೇ ಜಯಂತಿ ಪ್ರಯುಕ್ತ ನಗರದ ರಂಗತೋರಣ, ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಜೋಳದರಾಶಿಯ ರಾಮೇಶ ಟ್ರಸ್ಟ್ ಜೊತೆಗೂಡಿ ರಂಗಜ್ಯೋತಿ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚೇಳ್ಳಗುರ್ಕಿ ಎರ್ರಿತಾತ ಜೀವ ಸಮಾಧಿ ಮಠದಲ್ಲಿ ಶಾಸ್ತ್ರೋಕ್ತ ಪೂಜೆಯೊಂದಿಗೆ ದೊಡ್ಡನಗೌಡರ ಸ್ಮರಣೆಯ ರಂಗಜ್ಯೋತಿಯನ್ನು ಹೊತ್ತಿಸಲಾಯಿತು. ಧರ್ಮದರ್ಶಿಗಳಾದ ಬಾಳನಗೌಡ, ಕರಿಬಸವನಗೌಡ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಜೋಳದರಾಶಿ ಪೊಂಪನಗೌಡ ಹಾಗೂ ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಅಡವಿಸ್ವಾಮಿ ಹಾಗೂ ದೊಡ್ಡನಗೌಡರ ಬಂಧುಗಳಾದ ನಾಗಭೂಷಣಗೌಡ, ಬಸವನಗೌಡ ಮತ್ತಿತರರು ಹಾಜರಿದ್ದರು.
ಎರ್ರಿತಾತನ ಜೀವ ಸಮಾಧಿ ಮಠದಿಂದ ಜೋಳದರಾಶಿ ದೊಡ್ಡನಗೌಡರ ಭಾವಚಿತ್ರವನ್ನು ಹೊತ್ತ ಅಲಂಕೃತ ವಾಹನವು ರಂಗತೋರಣದ ಕಾರ್ಯಕರ್ತರ ಬೈಕ್ ರ್ಯಾಲಿಯೊಂದಿಗೆ ರಂಗ ಜ್ಯೋತಿ ಯಾತ್ರೆಯು ಹತ್ತಿರದ ದೊಡ್ಡನಗೌಡರ ಸಮಾಧಿ ತಲುಪಿತು. ಅಲ್ಲಿ ದೊಡ್ಡನಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೋಳದರಾಶಿ ಗ್ರಾಮದ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ದೊಡ್ಡನಗೌಡರ ಕುಟುಂಬದವರು ರಂಗಜ್ಯೋತಿಯನ್ನು ಭಕ್ತಿ ಗೌರವಗಳಿಂದ ಬರಮಾಡಿಕೊಂಡರು. ಪರಮದೇವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಪೂಜೆ ಪುಷ್ಪಗಳೊಂದಿಗೆ ಸ್ವಾಗತಿಸಿ ಜ್ಯೋತಿಯನ್ನು ಬೀಳ್ಕೊಟ್ಟರು. ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಲಹಳ್ಳಿಗಳಲ್ಲೂ ಎಲ್ಲ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಧಿಕಾರಿಗಳು, ಶಾಲಾ ಮಕ್ಕಳು ದೊಡ್ಡನಗೌಡರ ರಂಗಜ್ಯೋತಿ ದರ್ಶನ ಮಾಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಬಳ್ಳಾರಿಗೆ ಬೀಳ್ಕೊಟ್ಟರು.
ಬಳ್ಳಾರಿಯ ಡಾ. ರಾಜಕುಮಾರ ರಸ್ತೆಯ ರಾಘವ ಕಲಾಮಂದಿರಕ್ಕೆ ಆಗಮಿಸಿದ ಜ್ಯೋತಿಯನ್ನು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ರಾಘವ ಕಲಾಮಂದಿರದ ಕೆ.ಚೆನ್ನಪ್ಪ, ರಮೇಶಗೌಡ ಪಾಟೀಲ, ಎನ್.ಬಸವರಾಜ, ರಮಣಪ್ಪ ಭಜಂತ್ರಿ, ಚೋರನೂರು ಕೊಟ್ರಪ್ಪ, ಮೆಟ್ರಿ ಮೃತ್ಯುಂಜಯ ಸೇರಿದಂತೆ ಇನ್ನಿತರ ಸದಸ್ಯರು ಸ್ವಾಗತಿಸಿ ಕಲಾಮಂದಿರದ ಆವರಣದಲ್ಲಿರುವ ದೊಡ್ಡನಗೌಡರ ನಾಟಕಗುರು ಬಳ್ಳಾರಿ ರಾಘವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದಾಗ ಕಲಾವಿದರ ಜಯ ಘೋಷ ಗುರುಶಿಷ್ಯರ ಸಮಾಗಮವನ್ನು ಪ್ರತಿನಿಧಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ರವರು ಜೋಳದರಾಶಿ ಗ್ರಾಮದಲ್ಲಿನ ದೊಡ್ಡನಗೌಡರ ಸಮಾಧಿ ಇರುವ ಸ್ಥಳವನ್ನು ಜಿಲ್ಲಾಡಳಿತದ ವತಿಯಿಂದ ಅಭಿವೃದ್ದಿಪಡಿಸಲು ಯೋಜನೆಯೊಂದನ್ನು ಕೂಡಲೇ ರೂಪಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೋಳದರಾಶಿಯಿಂದ ಆಗಮಿಸಿದ ರಂಗಜ್ಯೋತಿಯು ದೊಡ್ಡನಗೌಡರ ನೆನಪನ್ನು ಮತ್ತಷ್ಟು ಪ್ರಜ್ವಲಿಸಿತೆಂದು ನೆರೆದವರು ಹರ್ಷ ವ್ಯಕ್ತಪಡಿಸಿದರು.