ಜೋಳದರಾಶಿ ಗುಡ್ಡದಲ್ಲಿ ಕೃಷ್ಣದೇವರಾಯ ಕಂಚಿನ ಪ್ರತಿಮೆ

ಸಂಜೆವಾಣಿ ವಾರ್ತೆ
ಹೊಸಪೇಟೆ ನ12: ವಿಜಯನಗರ ಸಾಮ್ರಾಜ್ಯದ ಪ್ರತೀಕವಾದ ಕೃಷ್ಣದೇವರಾಯ. ಈ ಸಾಮ್ರಾಟ ಕಂಚಿನ ಪ್ರತಿಮೆಯನ್ನು ಜೋಳದ ರಾಶಿ ಗುಡ್ಡದಲ್ಲಿ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ನಡೆದ ಶ್ರೀಸಹಸ್ರಾರ್ಜುನ ಜಯಂತಿ ಮಹಾರಾಜರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯರ ಕಂಚಿನ ಪ್ರತಿಮೆ ಚಿತ್ರದುರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದುರ್ಗದಿಂದ ಪ್ರತಿಮೆಯನ್ನು ಬರಮಾಡಿಕೊಂಡು, ಜೋಳದರಾಶಿ ಗುಡ್ಡದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.
ವಿಜಯನಗರ ಜಿಲ್ಲೆ ರಚನೆ ಕಾರ್ಯ ನನ್ನ ಅವಧಿಯಲ್ಲಿ ಆಗಿರುವುದು ನನ್ನ ಸೌಭಾಗ್ಯ. ವಿಜಯನಗರ ಜಿಲ್ಲೆ ರಚನೆಯಿಂದ ಭೂಮಿ, ನಿವೇಶನ ಬೆಲೆ ಏರಿದೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಅಭಿವೃದ್ಧಿಯಿಂದ ಬದಲಾವಣೆ ಸಹಜ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿಜಯನಗರ ಜಿಲ್ಲೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಾದರಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಎಸ್‍ಎಸ್‍ಕೆ ಸಮಾಜ ಸಣ್ಣ ಸಮಾಜವಾದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಯುವಕರು ಕೂಡ ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖಂಡರಾದ ದೇವೇಂದ್ರಸಾ ರಾಯಬಾಗಿ, ವಸಂತ ಇರಕಲ್, ಶಾಂತ ಮೆಹರವಾಡೆ, ರಾಘವೇಂದ್ರ ಕಾಟವಾ, ವೆಂಕಟೇಶ್ ಪವಾರ್, ಜಯಲಕ್ಷ್ಮಿ ಪವಾರ್, ಪ್ರಕಾಶ್ ಮೆಹರವಾಡೆ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.