
ಅಥಣಿ :ಸೆ.12: ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಮೊದಲು ನೀಲನಕ್ಷೆಯನ್ನು ತಯಾರಿಸುವಂತೆ ಅಥಣಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದರು.
ಅವರು ವಿದೇಶಿ ಪ್ರಯಾಣ ಮುಗಿಸಿಕೊಂಡು ಮತಕ್ಷೇತ್ರಕ್ಕೆ ಆಗಮಿಸಿದ ನಂತರ ಸೋಮವಾರ ಪುರಸಭೆಯಿಂದ ಪಟ್ಟಣದ ಜೋಡಿ ಕೆರೆಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿ ಮಾತನಾಡುತ್ತಿದ್ದರು. ಅನೇಕ ವರ್ಷಗಳಿಂದ ಜೋಡು ಕೆರೆಗಳ ಸ್ವಚ್ಛತೆಯಾಗಿರಲಿಲ್ಲ. ಹೀಗಾಗಿ ಕೆರೆಗಳ ಹತ್ತಿರ ಬರುವುದು ಅಷ್ಟೇ ಅಲ್ಲ ನೋಡಲು ಕೂಡ ಅಸಹ್ಯ ಎನಿಸುತ್ತಿತ್ತು. ಪುರಸಭೆಯ ಮುಖ್ಯಾಧಿಕಾರಿಯಾಗಿ ಅಶೋಕ ಗುಡಿಮನಿ ಆಗಮಿಸಿದ ಕೆಲವೇ ದಿನಗಳಲ್ಲಿಯೇ ಮೋಸೋಬಾ ಹಳ್ಳ, ಢಕ್ಕೆ ಸೇರಿದಂತೆ ಅನೇಕ ನಾಲಾಗಳನ್ನು, ಪಟ್ಟಣದ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಐತಿಹಾಸಿಕ ಕೆರೆಗಳ ಅಭಿವೃದ್ಧಿಗಾಗಿ ಮತ್ತು ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ. ಈ ಕೆರೆಗಳನ್ನು ರಾಜ್ಯದಲ್ಲಿಯೇ ಮಾದರಿ ಕೆರೆಗಳನ್ನಾಗಿ ಅಭಿವೃದ್ಧಿಪಡಿಸಲು ಅಧಿಕಾರಿಗಳು ಮೊದಲು ನೀಲನಕ್ಷೆಯನ್ನು ತಯಾರಿಸಬೇಕು. ಅಭಿವೃದ್ಧಿ ಕಾರ್ಯಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಎಂದು ಹೇಳಿದರು.
ಅಲೆಮಾರಿ ಜನಾಂಗಕ್ಕೆ ಬೇರಡೆ ವ್ಯವಸ್ಥೆ :
ಅಥಣಿ ಪಟ್ಟಣದ ಹೃದಯ ಭಾಗದಲ್ಲಿರುವ ಈ ಜೋಡಿ ಕೆರೆಗಳ ಮಧ್ಯದಲ್ಲಿನ ಸ್ಥಳದಲ್ಲಿ ಅಲೆಮಾರಿ ಜನಾಂಗದ ಅನೇಕ ಕುಟುಂಬಗಳು ಗುಡಿಸಲಿನಲ್ಲಿ ವಾಸವಾಗಿದ್ದು, ಅವರಿಗೆ ಸರಕಾರಿ ಸ್ಥಳದಲ್ಲಿ ನಿವೇಶನ ನೀಡಿ ಅವರನ್ನು ಇಲ್ಲಿಂದ ಸ್ಥಳಾಂತರಿಸಲು ತಹಶಿಲ್ದಾರ ಜೊತೆ ಚರ್ಚಿಸಲಾಗುವದು. ಸದ್ಯದ ಸ್ಥಿತಿಯಲ್ಲಿ ಕೆರೆಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛತೆ ಜೊತೆಗೆ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವಾಕ್ ಫಥ ನಿರ್ಮಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ರಾಮನಗೌಡ ಪಾಟೀಲ, ಮಹಾಂತೇಶ ಠಕ್ಕಣ್ಣವರ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ದತ್ತಾ ವಾಸ್ಟರ್, ರಾಜು ಗುಡೋಡಗಿ, ಆಶೀಫ್ ತಾಂಬೋಳಿ, ಪ್ರಮೋದ ಬಿಳ್ಳೂರ, ಉದಯಕುಮಾರ ಸೊಳಸಿ, ರಿಯಾಜ್ ಸನದಿ, ಮಲ್ಲಿಕಾರ್ಜುನ ಬುಟಾಳಿ, ವೆಂಕಟೇಶ ದೇಶಪಾಂಡೆ, ತಿಪ್ಪಣ್ಣ ಭಜಂತ್ರಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು,