ಜೋಗಿಮಟ್ಟಿ ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಮನವಿ

ಚಿತ್ರದುರ್ಗ.ಅ.೧೨; ಕರ್ನಾಟಕದ ಮಿನಿ ಊಟಿ ಎಂದೇ ಪ್ರಸಿದ್ಧಿ ಹೊಂದಿರುವ, ಪ್ರವಾಸಿಗರ ನೆಚ್ಚಿನ ತಾಣ ಜೋಗಿಮಟ್ಟಿ ಹಾಗೂ ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಹೋಗಲೆಂದು ಮಾಡಿರುವ ಹೊಸ ಮಾರ್ಗ ಮಧ್ಯೆ ಡ್ರೈನೇಜ್ ಒಡೆದು ರಸ್ತೆ ತುಂಬೆಲ್ಲ ನದಿಯಂತೆ ಹರಿದು ಹೋಗುತ್ತಿದೆ. ಇದು ಕಳೆದ ಐದಾರು ದಿನಗಳಿಂದ ನಿರಂತರವಾಗಿ ಹರಿಯುತ್ತಿದ್ದರೂ ಸಂಬಂಧಪಟ್ಟ ಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಸುಳಿಯುವ ಪ್ರಯತ್ನವನ್ನು ಸಹ ಮಾಡಿಲ್ಲ. ಜೋಗಿಮಟ್ಟಿ ರಸ್ತೆಯ ಸೇತುವೆ ಎಂದೇ ಕರೆಯಲ್ಪಡುವ ಈ ಜಾಗವು ಅಗಲೀಕರಣವೂ ಆಗದೇ ಅತ್ಯಂತ ಕಿರಿದಾಗಿದೆ. ಅದೂ ಸಾಲದೆ ಈಗ ರಸ್ತೆ ಮಧ್ಯದಲ್ಲಿ ಡ್ರೈನೇಜ್ ತುಂಬಿ ಹರಿಯುತ್ತಿದ್ದು, ನೀರು ಹೆಚ್ಚಾಗು ಡ್ರೈನೇಜ್ ಗುಂಡಿಯೇ ಕಾಣದಂತಾಗಿ ಹಲವರು ಬಿದ್ದು ಪೆಟ್ಟು ತಿಂದಿರುವ ಘಟನೆಯು ಸಹ ನಡೆದಿದೆ. ಆದಾಗ್ಯು ಇದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿಲ್ಲ. ಇದು ಜೋಗಿಮಟ್ಟಿ, ಮಾಸ್ತಮ್ಮ ಲೇಔಟ್, ಸ್ಟೇಡಿಯಂ ರಸ್ತೆ, ಜಿ.ಪಂ.ಗೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಪ್ರತಿ ನಿತ್ಯ ಹಲವಾರು ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳೇ ಸಂಚರಿಸುವ ಮಾರ್ಗವಾಗಿದೆ. ಆದರೂ ಯಾವೊಬ್ಬ ವ್ಯಕ್ತಿಗಳು ಸಹ ಈ ಬಗ್ಗೆ ಚಿಂತಿಸಿದಂತೆ ಕಾಣುತ್ತಿಲ್ಲ. ಪಾದಾಚಾರಿಗಳು, ಸಾಮಾನ್ಯ ಜನರು ಮಾತ್ರ ಈ ನೋವು ಅನುಭವಿಸಲಾಗದೆ ಹೇಳಲೂ ಆಗದೆ ಒದ್ದಾಡುತ್ತ ಇಡೀ ಶಾಪ ಹಾಕುತ್ತಿದ್ದಾರೆ. ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟವರಿಗೆ ಒತ್ತಾಯಿಸುತ್ತಿದ್ದಾರೆ.