ಜೋಗಿನಗೆ ಮುಖ್ಯಮಂತ್ರಿ ಸ್ವರ್ಣ ಪದಕ

ಬಾದಾಮಿ, ಮಾ 31: ಕಳೆದ ಎರಡು ದಶಕಗಳಿಂದ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಬಡ್ತಿ ಹೊಂದಿ ಗಣನೀಯ ಸೇವೆ ಸಲ್ಲಿಸಿದ್ದರ ಹಿನ್ನಲೆಯಲ್ಲಿ 2020 ರ ಸಾಲಿನ ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಇಲ್ಲಿನ ಜೋಗಿನ ಕುಟುಂಬ ದಕ್ಷ ಡಿವೈಎಸ್ಪಿ ಅಧಿಕಾರಿ ಗೋಪಾಲ ಡಿ. ಜೋಗಿನ ಅವರು ಆಯ್ಕೆಯಾಗಿದ್ದಾರೆ.
ಇವರು ಬರುವ ಏ.2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ವರ್ಣ ಪದಕವನ್ನು ಸ್ವೀಕರಿಸಲಿದ್ದಾರೆ. ಇವರು ಎರಡು ದಶಕಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಪಿಎಸೈ ಆಗಿ ಸೇವೆ ಸಲ್ಲಿಸುವ ಮೂಲಕ ಸೇವೆ ಆರಂಭಿಸಿ ಇದೀಗ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬ್ರಷ್ಟಾಚಾರ ನಿಗ್ರಹ ದಳದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಮೊದಲ ರೋಣ ಪಿಎಸೈ ಆಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ನಡೆದ ಕೋಮುಗಲಭೆಯನ್ನು ಹತೋಟಿಗೆ ತಂದು ಶಾಂತಿ ನೆಲೆಸುವಂತೆ ಮಾಡಿದ್ದು ಮತ್ತು ವಿಜಯಪುರ ಜಿಲ್ಲೆಯಲ್ಲಿ ಅಬಕಾರಿ ಮತ್ತು ಲಾಟರಿ ದಳದ ಸಿಪಿಆಯ್ ಆಗಿದ್ದಾಗ ಸುಮಾರು 600 ಕುಟುಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಳು ಪ್ರಯತ್ನಿಸಿರುವ ಕಾರ್ಯ ಶ್ಲಾಘನೀಯವಾಗಿದೆ.
ಈ 600 ಕುಟುಂಬಗಳಿಗೆ ಕಳ್ಳಬಟ್ಟಿ ಇಳಿಸುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅವರ ಮನವೊಲಿಸಿ ಆ ನಿವಾಸಿಗಳಿಗೆ ಸರಕಾರದ ಸಹಾಯಧನ ಮತ್ತು ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ದೊರಕಿಸಿ ಕೊಡುವ ಮೂಲಕ ಅವರ ಸ್ವತಂತ್ರ ಬದುಕಿಗೆ ಉದ್ಯೋಗ ದೊರಕಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿರುವುದು ಪ್ರಮುಖವಾಗಿವೆ.
ನಂತರ ದಿನಗಳಲ್ಲಿ ಲೋಕಾಯುಕ್ತದಲ್ಲಿ ಸಿಪಿಆಯ್ ಹಾಗೂ ಎಸಿಬಿ ಯಲ್ಲಿ ಡಿವೈಎಸ್ಪಿ ಬ್ರಷ್ಟರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುವುದರ ಜೊತೆಗೆ ಪೊಲೀಸ್ ಇಲಾಖೆಯಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಸರಕಾರ ಇದೀಗ ಮುಖ್ಯಮಂತ್ರಿಗಳ ಬಂಗಾರದ ಪದಕಕ್ಕೆ ಆಯ್ಕೆ ಮಾಡಿದೆ. ಇದಕ್ಕೆ ಇಲ್ಲಿನ ನಿವಾಸಿಗಳು ಸರಕಾರಕ್ಕೆ ಮತ್ತು ಗೋಪಾಲ ಡಿ. ಜೋಗಿನ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.