ಜೋಗಕ್ಕೆ ಕಾಯಕಲ್ಪ ಉದುತಡಿಗೆ ಅಕ್ಷರಧಾಮ ರೂಪ

ಶಿವಮೊಗ್ಗ, ಏ. ೨೧: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವನ್ನು ರಾಜ್ಯದ ಮಾದರಿ ಮೃಗಾಲಯವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ತ್ಯಾವರೆಕೊಪ್ಪ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳ ಸಭೆ ನಡೆಸಿ, ಈ ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ಮೃಗಾಲಯದ ಅಭಿವೃದ್ಧಿಗೆ ೮-೧೦ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಉದ್ದೇಶಿತ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸುಮಾರು ೧೦ ಕೋಟಿ ರೂ.ಗಳ ಅಗತ್ಯವಿದ್ದು, ಅದನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಲು ಯತ್ನಿಸಲಾಗುವುದು. ಅದಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರದ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸ್ಥಳೀಯ ಕೈಗಾರಿಕೋದ್ಯಮಿಗಳು, ದಾನಿಗಳು, ಅಥವಾ ಖಾಸಗಿ ವ್ಯಕ್ತಿಗಳ ಸಹಕಾರ ಪಡೆದು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇದರಿಂದಾಗಿ ಪ್ರಾಣಿ ಪಕ್ಷಿ ಪ್ರಿಯರಿಗೆ ಸಮಾಧಾನಕರ ವಾತಾವರಣ ನಿರ್ಮಾಣವಾಗಲಿದೆ. ಅಲ್ಲದೇ ಮುಂದಿನ ಪೀಳಿಗೆಗೆ ವನ್ಯಸಂಕುಲದ ಬಗೆಗಿನ ಪ್ರೀತಿ, ಅಭಿಮಾನ ಮೂಡಿಸಲು ಸಾಧ್ಯವಾಗಲಿದೆ ಎಂದರು.
ರಾಜ್ಯ ಸರ್ಕಾರವು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಅನೇಕ ಕಾಮಗಾರಿಗಳಿಗೆ ಕೋಟ್ಯಾಂತರ ರೂ.ಗಳನ್ನು ಮಂಜೂರು ಮಾಡಿದೆ. ವಿಶೇಷವಾಗಿ ವಿಶ್ವವಿಖ್ಯಾತ ಜೋಗ-ಜಲಪಾತದ ಅಭಿವೃದ್ಧಿಗೆ ೧೫೦ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳೆಗಾಲದ ಕೆಲವೇ ದಿನಗಳಲ್ಲಿ ನೋಡಲಾಗುತ್ತಿದ್ದ ಜೋಗದ ಸೌಂದರ್ಯವನ್ನು ಸರ್ವ ಋತುಮಾನಗಳನ್ನು ನೋಡುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂಬಂಧ ಕೆ.ಪಿ.ಟಿ.ಸಿ.ಎಲ್.ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಾರಾಂತ್ಯದಲ್ಲಿ ಜಲಪಾತಕ್ಕೆ ನೀರನ್ನು ಹರಿಯಬಿಡಲಾಗುತ್ತಿದೆ. ಇದರಿಂದಾಗಿ ರಾಜ್ಯದ ಮೂಲೆಮೂಲೆಗಳಿಂದ ಪ್ರತಿದಿನ ಸುಮಾರು ೨೦ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುವ ಅಂದಾಜಿದೆ ಎಂದು ತಿಳಿಸಿದರು.
ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆಬಿಡಾರವನ್ನು ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ ೨೦ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತೆಯೇ ಶಿವಶರಣೆ ಅಕ್ಕಮಹಾದೇವಿ ಅವರ ಜನ್ಮಸ್ಥಳ ಉಡುತಡಿಯನ್ನು ೩೦ ಕೋಟಿ ರೂ. ವೆಚ್ಚದಲ್ಲಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ೨ದಿನಗಳ ಕಾಲ ತಂಗಿದ್ದು, ಪ್ರವಾಸದ ಸವಿ ಅನುಭವಿಸಿ, ಉಲ್ಲಸಿತರಾಗುವಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಅವರು ಮಾತನಾಡಿ, ರಾಜ್ಯದ ಈ ಮೃಗಾಲಯವು ವಿಶಾಲವಾದ ಪ್ರದೇಶವನ್ನು ಹೊಂದಿದ್ದು, ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ನೆರೆಯ ರಾಜ್ಯ ಮತ್ತು ದೇಶಗಳಿಂದ ಇನ್ನಷ್ಟು ಪ್ರಾಣಿಪಕ್ಷಿಗಳನ್ನು ತರಲಾಗುವುದು ಎಂದರು.
ಪ್ರಸ್ತುತ ಮೃಗಾಲಯದಲ್ಲಿ ೨೮ ವಿವಿಧ ಪ್ರಾಣಿ ಪಕ್ಷಿಗಳ ಆವರಣಗಳ ಕಾಮಗಾರಿ ಪೂರ್ಣಗೊಂಡಿದೆ. ಕಾಡುಕೋಣ ಸಫಾರಿ ಮತ್ತು ಆವರಣದ ಕಾಮಗಾರಿಯೂ ಪ್ರಗತಿಯಲ್ಲಿದೆ. ಉಳಿದಂತೆ ಇನ್ನೂ ೩೨ ಪ್ರಾಣಿಪಕ್ಷಿಗಳ ಆವರಣಗಳ ಕಾಮಗಾರಿ ನಡೆಸಲು ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ ತ್ಯಾವರೆಕೊಪ್ಪದಲ್ಲಿ ಸುಸಜ್ಜಿತ ಪಶು ಆಸ್ಪತ್ರೆ, ಕಚೇರಿ ಕಟ್ಟಡ, ಹಾಗೂ ಪ್ರಾಣಿಗಳ ಪುನವರ್ಸತಿ ಕೇಂದ್ರದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.