ಜೊಹಾನ್ಸ್‌ಬರ್ಗ್ ಅಗ್ನಿ ದುರಂತ ನಮಗೆ ಎಚ್ಚರಿಕೆ ಗಂಟೆ

ಜೊಹಾನ್ಸ್‌ಬರ್ಗ್, ಸೆ.೧- ದಕ್ಷಿಣ ಆಫ್ರಿಕಾದ ರಾಜಧಾನಿ ಜೊಹಾನ್ಸ್‌ಬರ್ಗ್‌ನ ಕೇಂದ್ರ ಭಾಗದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು ನಮಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ತಿಳಿಸಿದ್ದಾರೆ. ಈಗಾಗಲೇ ದುರ್ಘಟನೆಯಲ್ಲಿ ೧೨ ಮಕ್ಕಳು ಸೇರಿದಂತೆ ೭೪ ಮೃತಪಟ್ಟಿದ್ದು, ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಈ ವೇಳೆ ಘಟನಾ ಸ್ಥಳದಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡಿರುವ ರಾಮಫೋಸಾ, ಅಗ್ನಿ ಅವಘಡವನ್ನು ಹೆಚ್ಚಿನ ಮಟ್ಟದಲ್ಲಿ ತನಿಖೆ ನಡೆಸಬೇಕಿದೆ. ಅಲ್ಲದೆ ಭವಿಷ್ಯದ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ನಾವು ಪಾಠಗಳನ್ನು ಕಲಿಯಬೇಕಾಗಿದೆ. ನಗರದ ಒಳಗಿನ ವಸತಿ ಪರಿಸ್ಥಿತಿಯನ್ನು ಪರಿಹರಿಸುವ ಕಾರ್ಯ ಆರಂಭಿಸಲು ಇದು ಎಚ್ಚರಿಕೆಯ ಕರೆಯಾಗಿದೆ. ಈ ಕಟ್ಟಡವು ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಹಾಗೂ ಮಹಿಳೆಯರ ನಿವಾಸವಾಗಿತ್ತು. ಆದರೆ ಅವಧಿ ಮುಕ್ತಾಯದ ಬಳಿಕ ಇತರೆ ಕಾರ್ಯಕ್ಕೆ ಬಳಸಾಗಿದೆ. ನಗರದ ಒಳಪ್ರದೇಶಗಳಲ್ಲಿನ ವಸತಿ ಮತ್ತು ಸೇವೆಗಳ ಸಮಸ್ಯೆಗಳನ್ನು ಎದುರಿಸಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಹಿಡಿಯಬೇಕು. ಅಲ್ಲದೆ ಅವಘಡ ಸಂಭವಿಸಿದ ೧೦ ನಿಮಿಷಗಳ ಬಳಿಕ ಅಗ್ನಿಶಾಮಕದ ದಳ ಆಗಮಿಸಿತ್ತು ಎಂದು ಅವರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೊಹಾನ್ಸ್‌ಬರ್ಗ್ ನಗರದ ಮ್ಯಾನೇಜರ್ ಫ್ಲಾಯ್ಡ್ ಬ್ರಿಂಕ್, ೨೦೦ ಕುಟುಂಬಗಳು ಬೆಂಕಿ ಅವಘಡದಿಂದ ಹಾನಿಗೊಳಗಾಗಿವೆ ಮತ್ತು ವಸತಿ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.