ಜೊಹಾನ್ಸ್‌ಬರ್ಗ್‌ನಲ್ಲಿ ಅನಿಲ ಸ್ಫೋಟ: ಓರ್ವ ಸಾವು: ೪೧ ಮಂದಿಗೆ ಗಾಯ

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ), ಜು.೨೦- ಇಲ್ಲಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಸ್ (ಸಿಬಿಡಿ)ಯಲ್ಲಿ ಸಂಭವಿಸಿದ ರಹಸ್ಯಮಯ ಸ್ಫೋಟದ ಪರಿಣಾಮ ಓರ್ವ ಮೃತಪಟ್ಟು, ೪೧ ಮಂದಿ ಗಾಯಗೊಂಡ ಘಟನೆ ನಡೆದಿದೆ. ಕೆಲವೊಂದು ಮೂಲಗಳ ಪ್ರಕಾರ ಗ್ಯಾಸ್‌ವೊಂದರ ಕಾರಣ ಸ್ಫೋಟ ನಡೆದಿದೆ ಎಂದು ಹೇಳಲಾಗಿದ್ದರೂ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಗೊಂಡಿಲ್ಲ.
ಸ್ಫೋಟದ ತೀವ್ರತೆಗೆ ರಸ್ತೆಗಳೇ ಭೂಕಂಪವಾದ ರೀತಿಯಲ್ಲಿ ಮೇಲೆದ್ದಿದ್ದು, ಅಲ್ಲದೆ ೨೩ಕ್ಕೂ ಹೆಚ್ಚಿನ ಕಾರ್‌ಗಳು ದೂರಕ್ಕೆಸೆಯಲ್ಪಟ್ಟಿವೆ ಎನ್ನಲಾಗಿದೆ. ಭೂಗತ ಗ್ಯಾಸ್‌ಸ್ಫೋಟದ ಪರಿಣಾಮ ಅವಘಡ ಸಂಭವಿಸಿದೆ ಎಂಬ ಮಾತು ಸದ್ಯ ಹರಿದಾಡುತ್ತಿದ್ದು, ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಪ್ರಕಟನೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಇಲ್ಲಿನ ರಸ್ತೆಗಳಡಿಯಲ್ಲಿ ಹಲವು ರೀತಿಯ ಅನಿಲ ಸಂಪರ್ಕ ಹೊಂದಿದ್ದು, ಇದರಿಂದಲೇ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಪುರಾವೆ ಎಂಬಂತೆ ಜುಲೈ ಆರಂಭದಲ್ಲಿ ಜೋಹಾನ್ಸ್‌ಬರ್ಗ್‌ನ ಹೊರವಲಯದಲ್ಲಿ ವಸಾಹತು ಪ್ರದೇಶದಲ್ಲಿ ನಡೆದ ವಿಷಕಾರಿ ನೈಟ್ರೇಟ್ ಅನಿಲ ಸೋರಿಕೆಯ ಪರಿಣಾಮ ಕನಿಷ್ಠ ಮೂರು ಮಕ್ಕಳು ಸೇರಿದಂತೆ ೧೭ ಮಂದಿ ಮೃತಪಟ್ಟಿದ್ದರು. ವಸಾಹತು ಪ್ರದೇಶದಲ್ಲಿ ಅಕ್ರಮವಾಗಿ ಚಿನ್ನ ಸಂಸ್ಕರಣೆ ವ್ಯವಹಾರ ನಡೆಸಲಾಗುತ್ತಿದ್ದು, ಇದರಿಂದ ನೈಟ್ರೇಟ್ ಅನಿಲ ಸೋರಿಕೆಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ಸದ್ಯದ ಘಟನೆಯು ನಗರದ ಮೂಲಸೌಕರ್ಯದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಸಮರ್ಪಕ ರೀತಿಯಲ್ಲಿ ಗ್ಯಾಸ್ ಅನಿಲದ ಪೂರೈಕೆಯ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ಗಾಯಗೊಂಡವರ ಪೈಕಿ ಹಲವು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.