ಜೊತೆಯಾಗಿ ಬಂದ ಎಳ್ಳಮವಾಸ್ಯೆ,ಸಂಕ್ರಾಂತಿ ನಗರದ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿಗೆ ಹೆಚ್ಚಿದ ಬೇಡಿಕೆ

ಕಲಬುರಗಿ ಜ 12 : ಬಹು ವರ್ಷಗಳ ನಂತರ ಎಳ್ಳಮವಾಸ್ಯೆ ಮತ್ತು ಸಂಕ್ರಮಣ ಹಬ್ಬಗಳು ಒಂದೇ ದಿನದ ಅಂತರದಲ್ಲಿ ಬಂದಿದ್ದರಿಂದ ಕಾಯಿ ಪಲ್ಲೆ ಸೋಸುವ ದಿನ (ಎಳ್ಳಮಾವಾಸ್ಯೆ ಮುನ್ನಾದಿನ)ವಾದ ಇಂದು ನಗರದ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ಹೂ ಹಣ್ಣುಗಳ, ಕಾಳುಗಳ ಮಾರಾಟ ಜೋರಾಗಿಯೇ ನಡೆದಿದೆ.
ಕಬ್ಬು, ಸುಲಗಾಯಿ( ಹಸಿ ಕಡಲೆ ಗಿಡ), ಪೇರಲ ಹಣ್ಣು, ಬಾರಿಕಾಯಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.ಇನ್ನು ತರಕಾರಿಗಳಾದ ಬದನೆಕಾಯಿ,ಅವರೆಕಾಯಿ,ಗಜ್ಜರಿ, ಸೌತೆಕಾಯಿ, ಭಜಿ ಪಲ್ಲೆ, ಮೆಂತೆಪಲ್ಲೆ, ಪುಂಡಿ ಪಲ್ಲೆ ಮೊದಲಾದ ತೊಪ್ಪಲು ಪಲ್ಲೆಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ನಗರದ ಸುಪರ್ ಮಾರುಕಟ್ಟೆ, ಕೋಟನೂರು ಬಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ,ಕೇಂದ್ರ ಬಸ್ ನಿಲ್ದಾಣ ಬಳಿಯ ಕಣ್ಣಿ ಮಾರುಕಟ್ಟೆ,ರಾಮಮಂದಿರ ಬಳಿಯ ಬಯಲು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಜಂಗುಳಿ ಕಂಡು ಬಂದಿತು.
ಹಬ್ಬದ ಸೀಸನ್ ಆದ್ದರಿಂದ ಕಾಯಿ ಪಲ್ಲೆ ಹಣ್ಣು ಹಂಪಲುಗಳ ದರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿಯೇ ಇತ್ತು.ಬದನೆಕಾಯಿ 60 ರೂ.ಗೆ ಕೆಜಿ,ಸೌತೆಕಾಯಿ 60 ರೂ.ಗೆ ಕೆಜಿ, ಅವರೆ ಕಾಯಿ 80 ರೂ.ಗೆ ಕೆಜಿ,ಪೇರಲ ಹಣ್ಣು 50 -60 ರೂ.ಗೆ ಕೆಜಿ, ಕಬ್ಬು 30 ರೂ.ಗೆ 1 ದರದಂತೆ ಮಾರಾಟ ನಡೆಯಿತು
ಉತ್ತರ ಕರ್ನಾಟಕದ ರೈತರ ದೊಡ್ಡ ಹಬ್ಬ ಎನಿಸಿದ ಎಳ್ಳಮವಾಸ್ಯೆಯ ದಿನ ಹೊಲ ತೋಟ ಉದ್ಯಾನಕ್ಕೆ ಊಟಕ್ಕೆ ಹೋಗುವವರು ದೇಶಿ ಶೈಲಿಯ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ. ನಾಳೆ ಸಂಕ್ರಾಂತಿ ಭೋಗಿ ಸಹ ಇರುವದರಿಂದ ತರಕಾತಿ ಹಣ್ಣು ಧಾನ್ಯ ಒಣಪಡಿಗಳ ಬಾಗಿನ ಕೊಡುವದು ಇತ್ಯಾದಿ ಸಂಪ್ರದಾಯಗಳಿರುತ್ತವೆ. ಆದ್ದರಿಂದ ತರಕಾರಿ ಹಣ್ಣು ಹಂಪಲಿಗೆ ಒಂದೆರಡು ದಿನ ಬಹು ಬೇಡಿಕೆ ಇರಲಿದೆ.