ಜೊತೆಜೊತೆಯಲಿ… ನಗುನಗುತಲಿ…! ಮಾಜಿ ಸಿಎಂ ಪುತ್ರರು..!!

 ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜ. ೩೦: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ, ಶಿವಮೊಗ್ಗ ಜಿಲ್ಲಾ ರಾಜಕಾರಣ ಕೂಡ ಕ್ರಮೇಣ ಬಿಸಿಯೇರಲಾರಂಭಿಸಿದೆ. ಅದರಲ್ಲಿಯೂ ಮಾಜಿ ಸಿಎಂ ಪುತ್ರರ ನಡುವಿನ ಆರೋಪ – ಪ್ರತ್ಯಾರೋಪ ಬಿರುಸುಗೊಂಡಿತ್ತು.ಬಿ.ಎಸ್.ಯಡಿಯೂರಪ್ಪ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಎಸ್.ಬಂಗಾರಪ್ಪ ಪುತ್ರ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರ ನಡುವಿನ ರಾಜಕೀಯ ಜಂಗೀ ಕುಸ್ತಿ ದಿನದಿಂದ ದಿನಕ್ಕೆ ಕಾವೇರಲಾರಂಭಿಸಿತ್ತು.ಆದರೆ ಜ. 29 ರ ಸೋಮವಾರ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಹೂವು – ಹಣ್ಣು ಮಾರಾಟ ಕಟ್ಟಡ ಉದ್ಘಾಟನೆ ಸಮಾರಂಭವು ಈ ಇಬ್ಬರು ನಾಯಕರ ದೋಸ್ತಿಗೆ ವೇದಿಕೆಯಾಗಿತ್ತು.ರಾಜಕೀಯ ವೈಮನಸ್ಸು ಮರೆತು ಇಬ್ಬರು ನಾಯಕರು ಜೊತೆಜೊತೆಯಾಗಿ ಹೆಜ್ಜೆ ಹಾಕಿದರು. ಒಬ್ಬರಿಗೊಬ್ಬರು ಹಾಸ್ಯ ಚಟಾಕಿ ಹಾರಿಸುತ್ತ ನಗೆಗಡಲಲ್ಲಿ ತೇಲಿದ್ದು, ನೆರೆದಿದ್ದ ಸಭಿಕರ ಹುಬ್ಬೇರುವಂತೆ ಮಾಡಿಸಿತ್ತು!