ಜೊಕೊವಿಕ್ ಮೆಡ್ವೆಡೆವ್ ಶುಭಾರಂಭ

ಲಂಡನ್, ನ ೧೭ -ವಿಶ್ವದ ನಂ.೧ ಆಟಗಾರ ನೊವಾಕ್ ಜೊಕೊವಿಕ್ ಮತ್ತು ಡೇನಿಯಲ್ ಮೆಡ್ವೆಡೆವ್ ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ತಮ್ಮ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ.
ಸೋಮವಾರ ನಡೆದ ಟೋಕಿಯೊ ೧೯೭೦ರ ಗುಂಪನ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಸರ್ಬಿಯಾ ಆಟಗಾರ ೬-೩, ೬-೨ ನೇರ ಸೆಟ್ ಗಳಿಂದ ಡಿಯಾಗೊ ಶ್ವಾರ್ಟ್ಸ್ ಮನ್ ವಿರುದ್ಧ ಸುಲಭ ಜಯ ಗಳಿಸಿದರು. ಒಂದು ತಾಸು ೧೮ ನಿಮಿಷ ನಡೆದ ಹೋರಾಟದಲ್ಲಿ ಎರಡೂ ಸೆಟ್ ಗಳಲ್ಲೂ ಜೊಕೊವಿಕ್ ಪ್ರಾಬಲ್ಯ ಮೆರೆದರು.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ೬-೩, ೬-೪ ನೇರ ಸೆಟ್ ಗಳಿಂದ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಗೆದ್ದು ಶುಭಾರಂಭ ಮಾಡಿದರು. ೧ ಗಂಟೆ ೨೯ ನಿಮಿಷದ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್ಟನ್ನು ಸುಲಭವಾಗಿ ವಶಪಡಿಸಿಕೊಂಡ ಮೆಡ್ವೆಡೆವ್ ದ್ವಿತೀಯ ಸೆಟ್ ನಲ್ಲಿ ಅಲ್ಪ ಪ್ರತಿರೋಧ ಎದುರಿಸಿದರಾದರೂ ಅಂತಿಮವಾಗಿ ಪಂದ್ಯ ತಮ್ಮದಾಗಿಸಿಕೊಂಡರು.
ಮಂಗಳವಾರ ನಡೆಯಲಿರುವ ಲಂಡನ್ ೨೦೨೦ರ ಗುಂಪಿನ ಪಂದ್ಯಗಳಲ್ಲಿ ರಾಫೆಲ್ ನಡಾಲ್ ಮತ್ತು ಡಾಮಿನಿಕ್ ಥೀಮ್ ಹಾಗೂ ಸ್ಟೆಫಾನೋಸ್ ಸಿಟ್ಸಿಪಾಸಿ ಮತ್ತು ಆಯಂಡ್ರೆ ರುಬ್ಲೆವ್ ಸೆಣಸಾಟ ನಡೆಸಲಿದ್ದಾರೆ