ಜೊಕೊವಿಕ್‌ಗೆ ನಡಾಲ್ ಅಭಿನಂದನೆ

ಲಂಡನ್, ಜು.೧೨- ದಾಖಲೆಯ ಏಳನೇ ಬಾರಿಗೆ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಕ್‌ಗೆ ಇದೀಗ ಮತ್ತೋರ್ವ ದಿಗ್ಗಜ ಟೆನಿಸ್ ಆಟಗಾರ, ಸ್ಪೇನ್‌ನ ರಫೆಲ್ ನಡಾಲ್ ಅಭಿನಂದನೆ ಸಲ್ಲಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾದ ನಿಕ್ ಕಿರ್ಗಿಸ್ ವಿರುದ್ಧ ಹೋರಾಟಗಾರಿ ಗೆಲುವು ಸಾಧಿಸುವ ಮೂಲಕ ಜೊಕೊವಿಕ್ ದಾಖಲೆಯ ಏಳನೇ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಲದೆ ಸತತ ನಾಲ್ಕು ವಿಂಬಲ್ಡನ್ ಗೆದ್ದ ನಾಲ್ಕನೇ ಆಟಗಾರ ಎಂಬ ಹೆಗ್ಗಲಿಕೆಗೂ ಅವರು ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ೨೨ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಜೊಕೊವಿಕ್ ಇದೀಗ ಮತ್ತೊಮ್ಮೆ ತನ್ನ ಅಬ್ಬರ ಪ್ರದರ್ಶಿಸಿದ್ದಾರೆ. ಇನ್ನು ಪ್ರಶಸ್ತಿ ಗೆದ್ದ ಬಳಿಕ ಜೊಕೊವಿಕ್ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಂತಸ ಹಂಚಿಕೊಂಡಿದ್ದರು. ಇದಾದ ಬಳಿಕ ಕೂಡಲೇ ಅತ್ತ ನಡಾಲ್ ಅವರು ಜೊಕೊವಿಕ್ ಸಾಧನೆಯನ್ನು ಕೊಂಡಾಡಿ, ಅಭಿನಂದನೆ ಸಲ್ಲಿಸಿದ್ದಾರೆ. ?ವಾವ್ ಅತ್ಯದ್ಬುತ ಸನ್ನಿವೇಶ. ಆನಂದಿಸಿ, ಹಾರ್ದಿಕ ಅಭಿನಂದನೆಗಳು? ಎಂದು ನಡಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಟೆನಿಸ್ ಕೋರ್ಟ್‌ನಲ್ಲಿ ಬದ್ಧ ವೈರಿಗಳಂತೆ ಕಾದಾಡುವ ನಡಾಲ್ ಹಾಗೂ ಜೊಕೊವಿಕ್, ನಿಜಜೀವನದಲ್ಲಿ ತಾವು ಉತ್ತಮ ಸ್ನೇಹಿತರು ಎಂಬುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.