ಜೈ ಭಾರತ್‌ಗೆ ಜನಸಾಗರ

ಕೋಲಾರ,ಏ,೧೭:ಕೋಲಾರದಲ್ಲಿ ಭಾನುವಾರ ನಡೆದ ಜೈ ಭಾರತ್ ಸಮಾವೇಶಕ್ಕೆ ಹರಿದು ಬಂದ ಜನ ಸಾಗರ. ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೆರಿ ಸಮೀಪ ಏರ್ಪಡಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ
ಕೋಲಾರ- ಚಿಕ್ಕಬಳ್ಳಾಪುರ -ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೂಲಕ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಬೆಂಗಳೂರು ಚನ್ನೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದರಿಂದ ಬಸ್‌ಗಳು ರಸ್ತೆಯಲ್ಲಿಯೆ ಜನರನ್ನು ಇಳಿಸುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಹರ ಸಾಹಸ ಪಡಬೇಕಾಯಿತು.
ಕಾರ್ಯಕ್ರಮ ಬೆಳಗ್ಗೆ ೧೧.೩೦ಕ್ಕೆ ಪ್ರಾರಂಭಗೊಳ್ಳಬೇಕಾಗಿತ್ತು, ಆದರೆ ರಾಹುಲ್ ಗಾಂಧಿ ಆಗಮಿಸಿದ್ದು ೨ ಗಂಟೆಗೆ, ಅಲ್ಲಿಯ ತನಕ ಕಾರ್ಯಕರ್ತರು ಕಾಯಬೇಕಾಯಿತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಇಲ್ಲದೆ ಸೊರಗುವಂತಾಯಿತು.
ಕಾರ್ಯಕ್ರಮಕ್ಕೆ ನಿಗದಿಪಡಿಸಲಾಗಿದ್ದ ಅವಧಿ ೩ ಗಂಟೆ ತನಕ ಆಗಿದ್ದು ನಿಗಧಿತ ಅವಧಿಯ ನಂತರವೂ ಕಾರ್ಯಕ್ರಮ ಮುಂದುವರೆದ ಕಾರಣ ಶಾಸಕರಾದ ರಮೇಶ್ ಕುಮಾರ್, ಮತ್ತು ಎಸ್.ಎನ್.ನಾರಾಯಣಸ್ವಾಮಿ ವೇದಿಕೆಯಿಂದ ನಿರ್ಗಮಿಸಿದರು.
ಜಾಲಪ್ಪ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸಿ ಕಾರ್ಯಕ್ರಮದ ನಂತರ ಅದೇ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಿದರು.