ಜೈವೀರ ಹನುಮಾನ ಮಂದಿರದಲ್ಲಿ ನೂತನ ಉಪಾಕರ್ಮ

ಕಲಬುರಗಿ ಜು 31: ಇಲ್ಲಿನ ಕರುಣೇಶ್ವರ ನಗರದ ಜೈವೀರ ಹನುಮಾನ ಮಂದಿರದಲ್ಲಿ ಆಗಸ್ಟ್ 2ರಂದು ಬೆಳಿಗ್ಗೆ 7 ಗಂಟೆಗೆ ನೂತನ ಉಪಾಕರ್ಮ ಮತ್ತು ಶ್ರಾವಣಿ ಕಾರ್ಯಕ್ರಮವನ್ನು ದೇವಸ್ಥಾನ ಅಧ್ಯಕ್ಷ ಅವಿನಾಶ್ ಕುಲಕರ್ಣಿ ರೇವೂರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ. ಉಪಾಕರ್ಮ ಎಂದರೆ ಉಪನಯನ ಆದವರು ವೇದಾಧ್ಯಯನವನ್ನು ಪುನರಾರಂಭ ಮಾಡುವ ಒಂದು ಸಂಸ್ಕಾರ. ಹಾಗಾಗಿ ಬಡಾವಣೆಯ ವಿಪ್ರ ಬಾಂಧವರೆಲ್ಲರೂ ದೇವಸ್ಥಾನಕ್ಕೆ ಆಗಮಿಸಿ ಯಜ್ಞೋಪವೀತ ಧಾರಣೆ ಮಾಡಬೇಕೆಂದು ವಿನುತ ಜೋಶಿ ತಿಳಿಸಿದ್ದಾರೆ.