ಜೈವಿಕ ಡೀಸೆಲ್ ಬಳಕೆಯಿಂದ ರಾಷ್ಟ್ರದ ಸುಸ್ಥಿರ ಅಭಿವೃದ್ಧಿ ಸಾಧ್ಯ

ಕಲಬುರಗಿ.ಮಾ.18:ಜನಸಂಖ್ಯೆ ಬೆಳೆದಂತೆ ವಾಹನಗಳ ಸಂಖ್ಯೆಯಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್ ಪ್ರಮಾಣ ಹೆಚ್ಚಾಗಿ, ವಾಯು ಮಾಲಿನ್ಯ ಉಂಟಾಗಿ ಪರಿಸರ ಅಸಮತೋಲನವಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಜೈವಿಕ ಇಂಧನ ಬಳಕೆಯು ಅವಶ್ಯಕವಾಗಿದ್ದು, ಇದರಿಂದ ಪರಿಸರ ಸಮತೋಲನದ ಜೊತೆಗೆ ರಾಷ್ಟ್ರದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆಯೆಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ರಾಷ್ಟ್ರೀಯ ಜೈವಿಕ ಡೀಸೆಲ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೈವಿಕ ಇಂಧನ ಕಾರ್ಬನಮುಕ್ತವಾಗಿದ್ದು, ಅದು ಧಹಿಸಿದರೆ ಪರಿಸರಕ್ಕೆ ಹಾನಿಯಾಗುವುದಿಲ್ಲ. ಇದು ಪ್ರಾಣಿಗಳ ಕೊಬ್ಬು, ವನಸ್ಪತಿ ಅಥವಾ ಗಿಡಮೂಲಿಕೆಗಳಿಂದ ತಯಾರಾಗುತ್ತದೆ. ಇದು ಸ್ವದೇಶಿಯಾಗಿ ಉತ್ಪಾದನೆಯಾಗುವುದರಿಂದ ವಿದೇಶದಿಂದ ಡೀಸೆಲ್ ಆಮದು ಮಾಡಿಕೊಳ್ಳುವುದು ತಡೆಯಬಹುದು. ಇದರಿಂದ ದೇಶಕ್ಕೆ ಉಳಿತಾಯವಾಗುತ್ತದೆ. ಜೈವಿಕ ಡೀಸೆಲ್ ಕಡಿಮೆ ವೆಚ್ಚದಾಯಕವಾಗಿದ್ದು, ಇದರ ಉತ್ಪಾದನೆ ಮತ್ತು ಬಳಕೆಯ ಬಗೆಯ ಕುರಿತು ವ್ಯಾಪಕ ಸಂಶೋಧನೆ, ಜಾಗೃತಿ ಜರುಗಬೇಕಾದದ್ದು ಪ್ರಸ್ತುತ ಅವಶ್ಯಕವಾದ ಸಂಗತಿಯಾಗಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.