ಜೈವಿಕ ಗೊಬ್ಬರ ಮೂಲಕ ರೈತರು ಸಮಗ್ರ ಕೃಷಿ ಯೋಜನೆ ಅಳವಡಿಸಿಕೊಳ್ಳಲಿ : ತಾರಾಮಣಿ

ಬೀದರ: ರೈತರು ಜೈವಿಕ ಗೊಬ್ಬರ ಬಳಸುವ ಮೂಲಕ ಸಮಗ್ರ ಕೃಷಿ ಯೋಜನೆ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ತಾರಾಮಣಿ ನುಡಿದರು.

ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೀದರ ವತಿಯಿಂದ ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶ್ರೀ ದತ್ತ ದಿಗಂಬರ ಮಾಣಿಕೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ತರಕಾರಿ ಬೀಜ ಹಾಗೂ ಸಾವಯವ ಸಸಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು “ಈ ಬಾರಿ ಸುಮಾರು 30 ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ 113 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳಿಗೆ ಬೀಜ ವಿತರಿಸಲಾಗಿದೆ. ಈ ಬಾರಿ ಡ್ಯಾಂಗಳು ಮತ್ತು ಕೆರೆಕಟ್ಟೆಗಳು ತುಂಬಿವೆ. ರೈತರ ಬೆಳೆ ಚೆನ್ನಾಗಿವೆ. ಒಂದಿಷ್ಟು ದಿವಸ ಬಿಸಿಲು ಬಿದ್ದಲ್ಲಿ ಬೆಳೆಗಳ ಇಳುವರಿ ಉತ್ತಮವಾಗಲಿದೆ ಎಂದು ನುಡಿದರು. ರೈತರು ಮುಂಗಾರು ಹಂಗಾಮಿನ ಬೆಳೆ ಜೊತೆಗೆ ಹಸು ಸಾಕಾಣಿಕೆ, ಜೇನು ಸಾಕಾಣಿಕೆ, ಎರೆಹುಳು ಸಾಕಾಣಿಕೆ, ತೋಟಗಾರಿಕೆ ಬೆಳೆಗಳು ಬೆಳೆದು ಅಭಿವೃದ್ಧಿಯಾಗಬೇಕು. ತುಂತುರು ಮತ್ತು ಹನಿ ನೀರಾವರಿ ಮುಖಾಂತರ ಬೆಳೆ ಬೆಳೆಯಬೇಕು. ಈ ಬಾರಿ ನಿಮ್ಮ ಹೊಲದ ಬೆಳೆ ನೀವೇ ಸರ್ವೆ ಮಾಡಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರಲ್ಲದೆ ಸಂಗಮೇಶ ಬಿರಾದಾರ ಅವರು ತಮ್ಮ ಟ್ರಸ್ಟ್ ಮೂಲಕ ದೇಶಿ ತರಕಾರಿ ಬೀಜ ಹಾಗೂ ಸಸಿ ನೀಡಿ, ಜನರ ಆರೋಗ್ಯ ವೃದ್ಧಿಸಲು ಪ್ರಯತ್ನಿಸುತ್ತಿರುವುದು ಅಭಿನಂದನೀಯ ಎಂದು ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ಕುಶಾಲ ಪಾಟೀಲ ಗಾದಗಿ ಮಾತನಾಡಿ “ಕೋವಿಡ್‍ನಂತಹ ಸಂದಿಗ್ಧ ಸನ್ನಿವೇಶದಲ್ಲಿ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಅದನ್ನು ವೃದ್ದಿಸುವ ನಿಟ್ಟಿನಲ್ಲಿ ಮನೆಯ ಅಂಗಳದಲ್ಲೇ ತರಕಾರಿ, ಹಣ್ಣು ಬೆಳೆದು ಆರೋಗ್ಯ ಕಾಪಾಡಿಕೊಳ್ಳಲು ಸಂಗಮೇಶ ಬಿರಾದಾರ ಅವರು ಇಂದು ಗ್ರಾಮದ ಜನತೆಗೆ ತರಕಾರಿ ಬೀಜ ಮತ್ತು ಸಸಿ ವಿತರಣೆ ಮಾಡುತ್ತಿರುವುದು ಖುಷಿ ತಂದಿದೆ. ಪ್ರತಿಯೊಬ್ಬರೂ ಈ ಬೀಜಗಳನ್ನು ಮತ್ತು ಸಸಿ ನೆಟ್ಟು ಅವರ ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವೈಷ್ಣೋದೇವಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಸಂಗಮೇಶ ಬಿರಾದಾರ ಅವರು ಮಾತನಾಡಿ “ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಗೋಶಾಲೆ ಆರಂಭ ಮಾಡಲಾಗಿದೆ. ರೈತರ ಹಿತಾಸಕ್ತಿಗಾಗಿ ಬೀಜ ಹಾಗೂ ಸಸಿ ವಿತರಣೆ ಮಾಡಲಾಗುತ್ತಿದೆ. ಮುಂದೆಯೂ ಜಿಲ್ಲೆಯಲ್ಲಿ ಗೋಮೂತ್ರದ ಸಹಕಾರದಿಂದ ವಿಭೂತಿ ಫಾರಂ ಸ್ಥಾಪಿಸುವ ಗುರಿ ಹೊಂದಲಾಗಿದೆ. ದಯವಿಟ್ಟು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶೋಕ ಸೂರ್ಯವಂಶಿ ಮಾತನಾಡಿ “ಜನರು ಮನೆಗೊಂದು ಪೌಷ್ಠಿಕ ಕೈತೋಟ ಸ್ಥಾಪಿಸಿ, ತಾಜಾ ತರಕಾರಿ ಬೆಳೆದು ಸೇವಿಸಿ ಆರೋಗ್ಯವಂತರಾಗಿ ಬದುಕಬೇಕು. ದೀರ್ಘಕಾಲಿನ ಕಾಯಿಲೆ ಬರದಂತೆ ಈ ದೇಶಿ ತರಕಾರಿಗಳು ತಡೆಯುತ್ತವೆ ಎಂದು ಸಲಹೆ ನೀಡಿದರು.

ಕೊನೆಯಲ್ಲಿ ನೂರಕ್ಕೂ ಹೆಚ್ಚು ಕರಿಬೇವು, ಮಾವು, ನಿಂಬೆ, ಹಲಸು ಹಾಗೂ ಇನ್ನೀತರ ಸಸಿಗಳನ್ನು ಹಾಗೂ ಬೀಜಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ತರಕಾರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಂಬರೀಶ, ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ, ಯರನಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ವಿಜಯಕುಮಾರ ಅನಕಲೆ, ಅಧ್ಯಕ್ಷ ರಾಜಕುಮಾರ ಚೆಲುವಾ, ವಕೀಲರಾದ ಪೀರಪ್ ಔರಾದೆ, ಸುಭಾಷ ಬಿರಾದಾರ, ಕಲ್ಲಪ್ಪ ಯರನಳ್ಳಿ, ದತ್ತು ಬಾವಗೆ, ನೀಲಕಂಠ ದೇಸಾಯಿ, ಪ್ರಭುಶೆಟ್ಟಿ ಎಕ್ಸಟ್ಟೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.