
ಕಲಬುರಗಿ,ಆ.10: ಕಲ್ಲಿದ್ದಲು, ಪೆಟ್ರೋಲಿಯಂ, ಉಷ್ಣಶಕ್ತಿಯಂತಹ ಇಂಧನಗಳ ನಿರಂತರ ಬಳಕೆಯಿಂದ ಬರಿಗಾಗುವ ಸ್ಥಿತಿಯಲ್ಲಿದೆ. ಆದ್ದರಿಂದ ಜೈವಿಕ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಮೂಲಗಳ ಬಗ್ಗೆ ವ್ಯಾಪಕ ಸಂಶೋಧನೆ ಮಾಡುವ ಮೂಲಕ ಉತ್ಪಾದನಾ ಪ್ರಮಾಣ ಅಧಿಕಗೊಳಿಸುವತ್ತ ಎಲ್ಲಾ ರಾಷ್ಟ್ರಗಳು ಕಾರ್ಯನಿರ್ವಹಿಸಬೇಕಾದ್ದು ಪ್ರಸ್ತುತ ಅವಶ್ಯಕವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವೆ ಸೇಡಂ ಹೇಳಿದರು.
ತಾಲೂಕಿನ ಫರಹತಾಬಾದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಜೈವಿಕ ಇಂಧನ ದಿನಾಚರಣೆ’ ಮತ್ತು ‘ವ್ಯಕ್ತಿತ್ವ ವಿಕಸನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯೇ ವ್ಯಕ್ತಿತ್ವ ವಿಕಸನವಾಗಿದೆ. ಇದು ನಿರಂತರವಾದ ಪ್ರಕ್ರಿಯೆಯಾಗಿದ್ದು, ಅದಕ್ಕೆ ಸತತ ಪ್ರಯತ್ನ, ಶೃದ್ಧೆ, ಅಧ್ಯಯನ, ಸತ್ಸಂಗ, ಸಾತ್ವಿಕ ಆಹಾರ, ಉತ್ತಮ ಜೀವನಶೈಲಿ ಅಗತ್ಯವಾಗಿದೆ ಎಂದು ನುಡಿದರು.
ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಜೈವಿಕ ಇಂಧನ ಭವಿಷ್ಯದ ಇಂಧನವಾಗಿದೆ. ಪರಿಸರಕ್ಕೆ ಪೂರಕವಾಗಿದೆ. ಭಾರತವು ಸಂಪತ್ಭರಿತ ರಾಷ್ಟ್ರವಾಗಿದ್ದು, ಕೃಷಿ, ಅರಣ್ಯ ತ್ಯಾಜ್ಯ, ಹೊಂಗೆ, ಜಟ್ರೋಫಾ ಮರದಿಂದ ಜೈವಿಕ ಇಂಧನದ ತಯಾರಿಕೆಯ ಪ್ರಮಾಣ ಹೆಚ್ಚಾಗಬೇಕು. ಇದನ್ನು ಯೋಜನಾಬದ್ಧವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ನೈಸರ್ಗಿಕ ಇಂಧನಗಳನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕು. ಇಂಧನವನ್ನು ಹಿತ-ಮಿತವಾಗಿ ಬಳಸಬೇಕು. ಪ್ರಸ್ತುತವಾಗಿ ಜೈವಿಕ ಇಂಧನಗಳ ಬಳಕೆ ಶೇ.3ರಷ್ಟಿದ್ದು, ಅದನ್ನು 2050ಕ್ಕೆ ಶೇ.25ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಸಾಪ ಕಲಬುರಗಿ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸಕನಕ್ಕೆ ಸಂಬಂಧಿಸಿದಂತೆ ದೃಷ್ಠಾಂತಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ತಳವಾರ, ಶಿಕ್ಷಕರಾದ ವಿಲಾಸರಾವ ಸಿನ್ನೂರಕರ್, ಗೋಪಾಲರೆಡ್ಡಿ, ಅರುಣಕುಮಾರ ಮಗಿಕರ್, ಪ್ರತಿಭಾ ಕುಲಕರ್ಣಿ, ಅಂಬುಜಾ ದೇಶಪಾಂಡೆ, ಸೇವಕರಾದ ಅವಿನಾಶ್, ಬಸವರಾಜ, ಮಹಮ್ಮದ್ ಸಲಿಮೋದ್ದೀನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.