
ಕಲಬುರಗಿ,ಮಾ.4: ನಗರದ ಕೇಂದ್ರ ಕಾರಾಗೃಹದಲ್ಲಿನ ಶಿಕ್ಷಾ ಬಂದಿಗಳಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಉಡುಗೆ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿತ್ತು.
ಪ್ರತಿಯೊಬ್ಬ ಬಂದಿಯ ಮನಃ ಪರಿವರ್ತಿಸಿ ಅವರಲ್ಲಿ ಹುದುಗಿರುವ ಕಲೆಯನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಸೂಕ್ತ ತರಬೇತಿಗಳನ್ನು ನೀಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಿ/ ಕಲ್ಪಿಸಿ ಅವರನ್ನು ಒಬ್ಬ ಒಳ್ಳೆಯ ಸತ್ಪ್ರಜೆಯನ್ನಾಗಿ ಮಾಡಿ ಕಾರಾಗೃಹದಿಂದ ಬಿಡುಗಡೆ ಹೊಂದಿ ಹೊಸ ವ್ಯಕ್ತಿಯಾಗಿ ಹೊಸಜೀವನಕ್ಕೆ ಅಂದರೆ ತನ್ನ ಕುಟುಂಬ ಮತ್ತು ಸಮಾಜಪ್ರತಿ ತನ್ನದೇ ಆದ ಕೊಡುಗೆಯನ್ನು ನೀಡಿ ದೇಶದ ಆರ್ಥಿಕದ ಅಭಿವೃದ್ಧಿ ಮತ್ತು ಬಲವರ್ದನೆಗೆ ಕಾರಣಿಕರ್ತರಾಗಬೇಕೆಂಬ ಉದ್ದೇಶದಿಂದ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಹಲವಾರು ತರಬೇತಿಗಳನ್ನು ನೀಡುವ ಉದ್ದೇಶ ಹೊಂದಿದ್ದು, ಆ ಪ್ರಯುಕ್ತ ಜನ ಶಿಕ್ಷಣ ಸಂಸ್ಥಾನ ಮುಖಾಂತರ ಉಚಿತವಾಗಿ ಆಯ್ದ 20 ಜನ ಶಿಕ್ಷಾ ಬಂದಿಗಳಿಗೆ ಉಡುಗೆ ತಯಾರಿಕೆ ತರಬೇತಿಯನ್ನು ಕಳೆದ 2022ರ ನವೆಂಬರ್ 3ರಿಂದ 2023ರ ಫೆಬ್ರವರಿ 25ರವರೆಗೆ ಮೂರು ತಿಂಗಳ ಅವಧಿ ನೀಡಲಾಯಿತು.
ತರಬೇತಿ ಪಡೆದ ಬಂದಿಗಳಿಗೆ ತರಬೇತಿಯ ಮೌಲ್ಯಮಾಪನ ಮಾಡುವುದಕ್ಕೆ ಜನಶಿಕ್ಷಣ ಸಂಸ್ಥಾನ ವತಿಯಿಂದ ಸಂಪನ್ಮೂಲ ವ್ಯಕ್ತಿಯನ್ನು ಒಳಗೊಂಡಂತೆ ನಾಲ್ಕು ಜನರ ತಂಡವಾದ ಶ್ರೀಮತಿ ಸಿಮ್ರಾನ್, ಶ್ರೀಮತಿ ಪಾವರ್ತಿ ಹಿರೇಮಠ್, ಬಸವರಾಜ್, ಮಲ್ಲಿಕಾರ್ಜುನ್ ದೊಡ್ಡಮನಿ ಅವರು ಆಗಮಿಸಿದ್ದರು. ಮೌಲ್ಯಮಾಪನದಲ್ಲಿ ಭಾಗಿಯಾದ ಬಂದಿಗಳನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದರು.
ಮೌಲ್ಯಮಾಪನ ನಡೆಯುವ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್, ಅಧೀಕ್ಷಕ ಬಿ.ಎಂ. ಕೊಟ್ರೆಶ್, ಸಹಾಯಕ ಅಧೀಕ್ಷಕ ಹುಸಾನಿಪೀರ್, ಜೈಲರಾದ ಶ್ರೀಮತಿ ಸೈನಾಜ್ ನಿಗೇವಾನ್, ಶಿಕ್ಷಕ ನಾಗರಾಜ್ ಮೂಲಗೆ, ಹೊಲಿಗೆ ಭೋಧಕಿ ಶ್ರೀಮತಿ ಸರಸ್ವತಿ ಮಾನೆ ಅವರು ಹಾಜರಿದ್ದು, ಮೌಲ್ಯಮಾಪನವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು.