ಜೈಲಿನಲ್ಲಿ ಮಾಜಿ ಸಚಿವ ವಿನಯ್ ಕಣ್ಣೀರು

ಧಾರವಾಡ.ನ.೭- ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ನಗರದ ೨ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿನ್ನೆ ೩ ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದ ಕುಲಕರ್ಣಿ ಅವರನ್ನು ಕರೆದೊಯ್ದ ಸಿಬಿಐ ಅಧಿಕಾರಿಗಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಬಿಐ ವಶದಲ್ಲಿರುವ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ವಿನಯ್‌ಕುಲಕರ್ಣಿ ಅವರನ್ನು ೫ ಮಂದಿ ಅಧಿಕಾರಿಗಳು ಇಂದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ನಿನ್ನೆಯಷ್ಟೆ ಕುಲಕರ್ಣಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ೩ ದಿನಗಳ ಕಾಲ ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಇಂದು ಬೆಳಿಗ್ಗೆ ಬೆಳಗಾವಿಯ ಹಿಂಡಲಗ ಜೈಲಿನಿಂದ ನಗರದ ಗೋಕುಲ್ ರಸ್ತೆ ಬಳಿ ಇರುವ ನೂತನ ಸಿಎಆರ್ ಮೈದಾನಕ್ಕೆ ಕರೆತಂದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ೯.೩೦ರಲ್ಲಿ ಬೆಳಗಾವಿಯಿಂದ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಬಂದಿದ್ದಾರೆ. ಇಂದು ಕುಲಕರ್ಣಿ ಅವರ ಜನ್ಮದಿನವಿರುವುದರಿಂದ ಕಾರ್ಯಕರ್ತರು, ಅಭಿಮಾನಿಗಳು ಬರಬಹುದೆಂದು ಮೈದಾನದ ಸುತ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯೋಗೀಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿರುವ ಸಿಬಿಐ, ಸಂಜೆ ವೇಳೆಗೆ ಬೆಳಗಾವಿಗೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ೨೦೧೭ ಜೂನ್ ೧೫ರಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‌ಗೆ ನುಗ್ಗಿದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು.
ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯವನ್ನೇ ಆಧಾರವಾಗಿಟ್ಟುಕೊಂಡು ಹಾಗೂ
ಇಲ್ಲಿಯವರೆಗೆ ಪ್ರಕರಣದ ಸಂಬಂಧ ಬಂಧಿಸಿರುವ ಆರೋಪಿಗಳ ಪರಿಚಯ ಕೃತ್ಯಕ್ಕೆ ಆರೋಪಿಗಳಿಗೆ ನೆರವಾಗಿರುವ ಬಗ್ಗೆಯೂ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿ ಉತ್ತರ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಗೀಶ್ ಕೊಲೆಯಲ್ಲಿ ಆರೋಪಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಆರೋಪಿಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ.
ಹಲವು ಹೇಳಿಕೆಗಳ ಕುರಿತು ಅವರಿಂದ ವಿವರಣೆ ಪಡೆಯಬೇಕಾಗಿದೆ. ಹೀಗಾಗಿ ಸಿಬಿಐ ವಶಕ್ಕೆ ನೀಡಬೇಕು’ ಎಂದು ಸಿಬಿಐ ಪರ ವಕೀಲ ಸುದರ್ಶನ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಬಾಹುಬಲಿ ದಾಂಡೇವಾಲೆ, ’ನಾಲ್ಕು ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಎಫ್‌ಐಆರ್ ಹಾಗೂ ದೋಷಾರೋಪಪಟ್ಟಿಯಲ್ಲಿ ವಿನಯ ಕುಲಕರ್ಣಿ ಅವರ ಹೆಸರಿಲ್ಲ.
ನಿರೀಕ್ಷಣಾ ಜಾಮೀನು ಪಡೆಯಲು ಸಹ ಅವರು ಅರ್ಜಿ ಸಲ್ಲಿಸಿಲ್ಲ. ಗುರುವಾರ ವಶಕ್ಕೆ ಪಡೆದ ನಂತರ ಸಿಬಿಐ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ’ ಎಂದರು.
’ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರುವ ವಿನಯ ಅವರು ಯಾವುದೇ ಕಾರಣಕ್ಕೂ ತನಿಖೆಯಿಂದ ತಪ್ಪಿಸಿಕೊಳ್ಳುವ ಜಾಯಮಾನದವರಲ್ಲ. ಅಲ್ಲದೇ ನ್ಯಾಯಾಂಗ ಬಂಧನದಲ್ಲಿದ್ದರೂ ಸಿಬಿಐ ಅಧಿಕಾರಿಗಳಿಗೆ ಆರೋಪಿಯನ್ನು ವಿಚಾರಣೆ ನಡೆಸಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಸಿಬಿಐ ವಶಕ್ಕೆ ನೀಡಬಾರದು, ನೀಡುವ ಅಗತ್ಯ ಕೂಡ ಇಲ್ಲ’ ಎಂದು ಮನವಿ ಮಾಡಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ಎಂ.ಪಂಚಾಕ್ಷರಿ ಅವರು ಅಂತಿಮವಾಗಿ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದ್ದರು.
ಪಕ್ಷದ ಮುಖಂಡರು ಕಾರ್ಯ ಕರ್ತರು ಸಾವಿರಾರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಅಸಹಾಯಕರಾಗಿರುವ ಹಿಂಡಲಗಾ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರೆ.
ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ದೊರೆಯದಿರುವುದಕ್ಕೆ ಬೇಸರ ಮಾಡಿಕೊಂಡಿದ್ದರು.
ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡುವಂತೆ, ವಿಚಾರಣೆಗಾಗಿ ತಮ್ಮನ್ನು ವಶಕ್ಕೆ ಪಡೆಯಲು ಬಂದ ಸಿಬಿಐ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡರು. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಹುಟ್ಟುಹಬ್ಬದ ಕಾರಣದಿಂದ ಅಭಿಮಾನಿಗಳು ಬರುತ್ತಾರೆಂಬ ಸಾಧ್ಯತೆ ಇದ್ದಿದ್ದರಿಂದ ಜೈಲಿನ ಆವರಣದಲ್ಲಿ ಭದ್ರತೆ ಮಾಡಲಾಗಿತ್ತು

:]