ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸಿದ ಇಬ್ಬರು ವಶಕ್ಕೆ

ಕಲಬುರಗಿ,ಆ.5-ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಗೆಳೆಯನಿಗೆ ಗಂಜಾ ಮತ್ತು ನಷೆ ಬರುವ ಪೇಪರ್ (ಟ್ರಿಪರ್) ಸರಬರಾಜು ಮಾಡಲು ಯತ್ನಿಸಿದ ಇಬ್ಬರನ್ನು ಜೈಲು ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹ್ಮದ್ ಪೈಜಾನ್ ಮತ್ತು ಅಬ್ದುಲ್ ರಹಮಾನ್ ಜರಡಿ ಎಂಬುವವರೆ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿ ಅಜಯ್ ಶರಣಪ್ಪ ಎಂಬಾತನಿಗೆ ಗಂಜಾ ಮತ್ತು ನಷೆ ಬರುವ ಪೇಪರ್ ಸರಬರಾಜು ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.
ಕೈದಿ ಅಜಯ್ ಶರಣಪ್ಪನನ್ನು ಭೇಟಿಯಾಗಿ ಎರಡು ಜೀನ್ಸ್ ಪ್ಯಾಂಟ್ ನೀಡಲು ಮಹ್ಮದ್ ಪೈಜಾನ್ ಮತ್ತು ಅಬ್ದುಲ್ ರಹಮಾನ್ ಜರಡಿ ಸಂದರ್ಶನ ಚೀಟಿಯೊಂದಿಗೆ ಜೈಲಿಗೆ ಹೋಗಿದ್ದರು. ಈ ವೇಳೆ ಅವರು ತಂದಿದ್ದ ಜೀನ್ಸ್ ಪ್ಯಾಂಟ್ ಪರಿಶೀಲಿಸಿದಾಗ ಜೀನ್ಸ್ ಪ್ಯಾಂಟಿನ ಒಳಗಡೆ ಪಟ್ಟಿಯಲ್ಲಿ ಕೈಯಿಂದ ಹೊಲಿಗೆ ಹಾಕಿದ್ದ ದಪ್ಪನೆಯ ವಸ್ತು ಪತ್ತೆಯಾಗಿದೆ. ಹೊಲಿಗೆ ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ 20 ಗ್ರಾಂ.ಗಾಂಜಾ ಮತ್ತು ನಷೆ ಬರುವ ಪೇಪರ್ ಪತ್ತೆಯಾಗಿದೆ. ತಕ್ಷಣವೇ ಇಬ್ಬರು ಆರೋಪಿಗಳನ್ನು ಜೈಲು ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.
ನಂತರ ಇಬ್ಬರು ಆರೋಪಿಗಳನ್ನು ಕೇಂದ್ರ ಕಾರಾಗೃಹದ ಕೆಎಸ್‍ಐಎಸ್‍ಎಫ್ ಪಿಐ ವಿಶ್ವನಾಥ ಪಾಟೀಲ ಮತ್ತು ಜೈಲರ್ ವಿಶ್ವನಾಥ ಪಾಟೀಲ ಅವರು ಫರಹತಾಬಾದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಇತ್ತೀಚೆಗೆ ಮಹಿಳೆಯೊಬ್ಬಳು ಜೈಲಿನಲ್ಲಿರುವ ಪತಿಗೆ ಇದೇ ರೀತಿ ಗಾಂಜಾ ಸರಬರಾಜಲು ಯತ್ನಿಸಿ ಪರಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.