ಜೈಲಿಗೆ ಮುನ್ನ ಆರ್.ಡಿ. ಪಾಟೀಲ್ ಮನೆ ಹತ್ತಿರ ಡಿಎಸ್‍ಪಿ ವೈಜನಾಥ್ ಕರೆದೊಯ್ದು ಮಹಜರು

ಕಲಬುರಗಿ,ಮೇ.14: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಕೆಎಸ್‍ಆರ್‍ಪಿ ಅಸಿಸ್ಟೆಂಟ್ ಕಮ್ಯಾಂಡೆಂಟ್ ಡಿಎಸ್‍ಪಿ ವೈಜನಾಥ್ ರೇವೂರ್‍ಗೆ ಜೈಲಿಗೆ ಕರೆದೊಯ್ಯುವ ಮುನ್ನ ಸಿಐಡಿ ಪೋಲಿಸರು ಪ್ರಕರಣದ ರೂವಾರಿ ಆರ್.ಡಿ. ಪಾಟೀಲ್ ಮನೆಯ ಹತ್ತಿರ ಕರೆದೊಯ್ದು ಸ್ಥಳ ಮಹಜರು ಮಾಡಿದರು.
ನಗರದ ಉದನೂರ್ ಕ್ರಾಸ್, ಹೈಕೋರ್ಟ್ ಬಳಿಯ ಆರ್.ಡಿ. ಪಾಟೀಲ್ ಮನೆಯ ಹತ್ತಿರ ಸ್ಥಳ ಮಹಜರ್ ಮಾಡಲಾಯಿತು. ಈ ಎರಡೂ ಸ್ಥಳಗಳಲ್ಲಿ ಪ್ರಕರಣದ ರೂವಾರಿ ಆರ್.ಡಿ. ಪಾಟೀಲ್ ಹಾಗೂ ವೈಜನಾಥ್ ರೇವೂರ್ ಭೇಟಿ ಆಗಿದ್ದರಂತೆ. ಪರೀಕ್ಷೆಗೂ ಮುಂಚೆ ಉದನೂರ್ ಕ್ರಾಸ್ ಬಳಿ ಸೇರಿ ಸಂಚು ರೂಪಿಸಿ ಅದರಂತೆ ಅಕ್ರಮ ಮಾಡಿದ್ದರು ಎಂದು ತಿಳಿದುಬಂದಿದೆ.
ಪಿಎಸ್‍ಐ ಪರೀಕ್ಷೆ ಅಕ್ರಮದ ರೂವಾರಿ ಆರ್.ಡಿ. ಪಾಟೀಲ್ ಜೊತೆಗೆ ನೇರ ಸಂಪರ್ಕ ಹೊಂದಿದ್ದ ಕೆಎಸ್‍ಆರ್‍ಪಿ ಅಸಿಸ್ಟೆಂಟ್ ಕಮ್ಯಾಂಡೆಂಟ್ ಡಿವೈಎಸ್‍ಪಿ ವೈಜನಾಥ್ ರೇವೂರ್, ಪರೀಕ್ಷಾ ಅಭ್ಯರ್ಥಿಗಳು ಹಾಗೂ ಆರ್.ಡಿ. ಪಾಟೀಲ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಆರ್.ಡಿ. ಪಾಟೀಲ್‍ನಿಗೆ ಪರಿಚಯಿಸಿ ಅಕ್ರಮಕ್ಕಾಗಿ ವ್ಯಾಪಾರ ಕುದಿರಿಸಿದ್ದಾನೆಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವೈಜನಾಥರನ್ನು ಮೇ 6ರಂದು ಬಂಧಿಸಿದ್ದರು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ ಏಳು ದಿನಗಳ ಕಾಲ ವೈಜನಾಥ್ ರೇವೂರ್‍ಗೆ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ಮಾಡಿದ ಸಿಐಡಿ ನಿನ್ನೆ ಜೈಲಿಗೆ ಸ್ಥಳಾಂತರ ಮಾಡಿದರು.
ವೈಜನಾಥ್ ರೇವೂರ್ ಪತ್ನಿ ಶ್ರೀಮತಿ ಸುನಂದಾ ವೈಜನಾಥ್ ರೇವೂರ್ ಅವರು ಕೇಂದ್ರ ಕಾರಾಗೃಹದ ಜೈಲರ್ ಆಗಿದ್ದು, ಅದೇ ಜೈಲಿಗೆ ಪತಿಯನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಅವರಿಗೆ ಮುಜುಗುರ ಉಂಟಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಪತಿಯನ್ನು ವಹಿಸಿಕೊಂಡು ಬರುವುದಾಗಲಿ ಅಥವಾ ತನಿಖೆಗೆ ಅಡ್ಡಿಪಡಿಸುವುದಾಗಲಿ ಸೇರಿದಂತೆ ಯಾವುದೇ ರೀತಿಯಲ್ಲಿ ಅಡಿ- ತಡೆಗಳನ್ನು ವೈಜನಾಥ್ ಪತ್ನಿ ಮಾಡಿಲ್ಲ ಎಂದು ಸಿಐಡಿ ಮೂಲಗಳು ಹೇಳಿವೆ.