ಜೈಲಲ್ಲಿ ಇದ್ದುಕೊಂಡು ಹತ್ಯೆಗೆ ಸ್ಕೆಚ್: ಆಕಾಶ್‌ಭವನ ಶರಣ್ ಪೊಲೀಸ್ ಕಸ್ಟಡಿಗೆ


ಮಂಗಳೂರು, ಎ.೨೪- ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಮಂಗಳೂರು ಪೊಲೀಸರು ಜೈಲಿನಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಾ.೧೭ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ೯ ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ರೌಡಿಶೀಟರ್ ಚಂದ್ರಹಾಸ ಪೂಜಾರಿ ಕೂಡ ಸಿಕ್ಕಿಬಿದ್ದಿದ್ದ. ತನಿಖೆ ವೇಳೆ ಈತ ಆಕಾಶಭವನ ಶರಣ್‌ನ ಸಹಚರನಾಗಿದ್ದು, ಕೊಲೆ ನಡೆಸಿ ಡಾನ್ ಆಗಲು ಸಂಚು ರೂಪಿಸಿರುವ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆಕಾಶಭವನ ಶರಣ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು. ಆಕಾಶಭವನ ಶರಣ್‌ನ ಸಹಚರರು ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಹಫ್ತಾ ವಸೂಲಿ ಅಲ್ಲದೆ ದರೋಡೆ ಕೃತ್ಯ ನಡೆಸುತ್ತಿದ್ದರು. ತಮ್ಮ ವಿರೋಧಿ ಗ್ಯಾಂಗ್ ಸದಸ್ಯರ ಕೊಲೆಗೆ ಸ್ಕೆಚ್ ಹಾಕಿದ್ದರು. ಈ ಮೂಲಕ ತಾವೇ ಡಾನ್ ಆಗಲು ನಿರ್ಧರಿಸಿದ್ದರು. ಅದಕ್ಕಾಗಿ ದರೋಡೆ ಕೃತ್ಯಗಳನ್ನು ನಡೆಸುತ್ತಿದ್ದರು. ಇವೆಲ್ಲವನ್ನೂ ಆಕಾಶಭವನ ಶರಣ್ ಜೈಲಿನಿಂದಲೇ ರೂಪಿಸುತ್ತಿರುವುದನ್ನು ಬಂಧಿತರು ಬಹಿರಂಗಪಡಿಸಿದ್ದರು. ಆಕಾಶಭವನ ಶರಣ್ ಮೇಲೆ ೨೦ ವಿವಿಧ ಕೇಸ್‌ಗಳು ಇದ್ದು, ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣವನ್ನು ಜೈಲಿನಲ್ಲಿದ್ದುಕೊಂಡು ಹೆಣೆದಿದ್ದ. ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ಬೆಂಗಳೂರು ಜೈಲು ಸೇರಿದ್ದ. ಈತನನ್ನು ಒಂದು ವಾರ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಆಕಾಶಭವನ ಶರಣ್ ಅಲ್ಲಿಂದಲೇ ಇಂಟರ್‌ನೆಟ್ ಕಾಲ್ ಮೂಲಕ ಅಪರಾಧ ಕೃತ್ಯಕ್ಕೆ ಸ್ಕೆಚ್ ಹಾಕುತ್ತಿರುವುದನ್ನು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆತನ ಭೇಟಿಗೆ ಜೈಲಿಗೆ ತೆರಳುವವರ ಜೊತೆ ತನ್ನ ಕೃತ್ಯ ನಡೆಸುವುದಕ್ಕೆ ಬೇಕಾದ ಸಲಹೆ, ಸೂಚನೆಗಳನ್ನು ನೀಡುತ್ತಿದ್ದ. ಈತ ಜೈಲಿನಲ್ಲಿರುವುದರಿಂದ ಈತನ ಸಹೋದರ ಸಹಚರರೊಂದಿಗೆ ಕೃತ್ಯಕ್ಕೆ ನೆರವಾಗುತ್ತಿದ್ದ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.