ಜೈಪುರ್: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ, ಜೂ.೨೬- ಹವಾಮಾನ ವೈಪರೀತ್ಯದ ಪರಿಣಾಮ ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಜೈಪುರ್‌ನಲ್ಲಿ ತುರ್ತು ಲ್ಯಾಡಿಂಗ್ ಆದ ಘಟನೆ ನಿನ್ನೆ ರಾತ್ರಿ ನಡೆದಿದೆ. ಆದರೆ ಬಳಿಕ ಮತ್ತೆ ಹಾರಾಟ ನಡೆಸಲು ಪೈಲೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸುಮಾರು ೩೫೦ ಪ್ರಯಾಣಿಕರು ಜೈಪುರ್ ವಿಮಾನ ನಿಲ್ದಾಣದಲ್ಲೇ ಸುಮಾರು ೩ ಗಂಟೆಗಳ ಕಾಲ ಸಿಲುಕಿಕೊಳ್ಳ ಬೇಕಾಯಿತು.
ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದ ಕಾರಣ ಇಂದು ಮುಂಜಾನೆ ೪ ಗಂಟೆಗೆ ದೆಹಲಿ ತಲುಪಬೇಕಿದ್ದ ಎಐ-೧೧೨ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಯಿತು. ವಿಮಾನವು ಜೈಪುರಕ್ಕೆ ತಿರುಗುವ ಮೊದಲು ಸುಮಾರು ೧೦ ನಿಮಿಷಗಳ ಕಾಲ ಆಕಾಶದಲ್ಲೇ ಸುತ್ತು ಹೊಡೆದಿತ್ತು. ಬಳಿಕ ಜೈಪುರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬಳಿಕ ಸುಮಾರು ಎರಡು ಗಂಟೆಗಳ ನಂತರ, ಲಂಡನ್‌ಗೆ ಹೋಗುವ ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸಲು ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಅನುಮತಿಯನ್ನು ಪಡೆದುಕೊಂಡಿತು. ಆದರೆ ಪೈಲಟ್ ಮತ್ತೆ ವಿಮಾನ ಹಾರಿಸಲು ನಿರಾಕರಿಸಿ ವಿಮಾನದಿಂದ ಕೆಳಗಿಳಿದಿದ್ದಾನೆ. ವಿಮಾನದ ಕರ್ತವ್ಯದ ಸಮಯದ ನಿರ್ಬಂಧಗಳು ಮತ್ತು ಕರ್ತವ್ಯದ ಅವಧಿಗಳು ನಿರಾಕರಣೆಗೆ ಕಾರಣ ಎಂದು ಪೈಲಟ್ ಹೇಳಿದ್ದಾರೆ. ಇದಲ್ಲದೇ ಕೆಲವು ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ. ಪರಿಣಾಮವಾಗಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಸುಮಾರು ೩೫೦ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಹುಡುಕುವಂತೆ ಕೇಳಲಾಯಿತು. ಸುಮಾರು ಮೂರು ಗಂಟೆಗಳ ನಂತರ ಕೆಲವು ಪ್ರಯಾಣಿಕರು ರಸ್ತೆ ಮೂಲಕ ದೆಹಲಿಗೆ ಕರೆದೊಯ್ಯಲಾಯಿತು. ಅಂತಿಮವಾಗಿ ಪೈಲಟ್‌ನನ್ನು ಬದಲಾಯಿಸಲು ವ್ಯವಸ್ಥೆ ಮಾಡಿದ ನಂತರ, ಅವರು ಅದೇ ವಿಮಾನವನ್ನು ದೆಹಲಿಗೆ ತೆಗೆದುಕೊಳ್ಳಲು ಸಾಧ್ಯವಾಯಿತು.