ಜೈನ ಮುನಿ ಹತ್ಯೆ; ಸಿಬಿಐ ತನಿಖೆಗೆ ನಕಾರ

ಮೇಲ್ಮನೆ ಕಲಾಪ
(ಸಂಜೆವಾಣಿ ಪ್ರತಿನಿಧಿಯಿಂದ)
ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಬಿಜೆಪಿಯ ಮೇಲ್ಮನೆ ಸದಸ್ಯರು ಇಂದು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು.

ಬೆಂಗಳೂರು, ಜು. ೧೨- ಜೈನ ಮುನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಹೀಗಾಗಿ ಸಿಬಿಐಗೆ ವಹಿಸುವ ಪ್ರಮೇಯವೇ ಎದುರಾಗುವುದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿಂದು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿಯ ಸದಸ್ಯ ಕೋಟಾ ಶ್ರೀನಿವಾಸಪೂಜಾರಿ ಸೇರಿದಂತೆ ಮತ್ತಿತರ ಸದಸ್ಯರುಗಳು ನಿನ್ನೆಯಿಂದ ಆರಂಭಿಸಿರುವ ಧರಣಿಯನ್ನು ವಿಧಾನ ಪರಿಷತ್ತಿನಲ್ಲಿ ಇಂದೂ ಮುಂದುವರೆಸಿ ಸಿಬಿಐ ತನಿಖೆಗೆ ವಹಿಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಿದ ಸಭಾನಾಯಕ ಎನ್.ಎಸ್. ಭೋಸರಾಜು ಅವರು, ನಿನ್ನೆ ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜೈನ ಮುನಿಯ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿರುವುದರಿಂದ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ತನಿಖೆಗೆ ಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೈನ ಮುನಿಗಳನ್ನು ಕೊಲೆ ಮಾಡಿದ ೬ ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿಪಕ್ಷ ಬಿಜೆಪಿ ಸದಸ್ಯರು ಈ ವಿಷಯವನ್ನು ಸಿಬಿಐಗೆ ವಹಿಸುವಂತೆ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಸಭಾ ನಾಯಕ ಎನ್.ಎಸ್. ಭೋಸರಾಜು ಅವರ ಮಾತಿಗೆ ಪೂರಕವಾಗಿ ಧ್ವನಿಗೂಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜೈನ ಮುನಿಯ ಹತ್ಯೆ ವಿಚಾರದಲ್ಲಿ ಯಾರ ಮುಲಾಜಿಗೂ ಸರ್ಕಾರ ಒಳಗಾಗುವುದಿಲ್ಲ. ಮುಚ್ಚು ಮರೆ ಮಾಡುವುದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.ಪೊಲೀಸ್ ಇಲಾಖೆ ವರದಿ ನೀಡಿದ ನಂತರವೂ ವಿರೋಧ ಪಕ್ಷಗಳಿಗೆ ಅನುಮಾನವಿದ್ದರೆ ಆ ನಂತರ ಚರ್ಚೆ ಮಾಡೋಣ. ಅದನ್ನು ಬಿಟ್ಟು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದರು.ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಜೈನ ಮುನಿಯ ಹತ್ಯೆ ಪ್ರಕರಣದಲ್ಲಿ ಸರ್ಕಾರ ಹಠಮಾರಿತನ ಪ್ರದರ್ಶಿಸುತ್ತಿದೆ. ಇದು ಒಳ್ಳೆಯದಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಹೇಳಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಜೈನ ಸಮುದಾಯ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಸರ್ಕಾರ ಹಠಮಾರಿತನ ಬಿಟ್ಟು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದರು.
ಜೈನ ಮುನಿಗಳ ಕೊಲೆ ಪ್ರಕರಣವನ್ನು ಸಮರ್ಥ ರೀತಿಯಲ್ಲಿ ತನಿಖೆ ನಡೆಸಬೇಕು. ಸರ್ಕಾರದ ನಡೆ ಭಯೋತ್ಪಾದಕರಿಗೆ ಬೆಂಬಲದಂತಿದೆ ಎಂದು ಆರೋಪಿಸಿದರು.
ಆಗ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣಭೈರೇಗೌಡ ಅವರು ಜೈನ ಮುನಿಯ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡುವುದು ಬೇಡ. ಸರ್ಕಾರ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದರು.ಆಗಲೂ ಸದನದ ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ಸಿಬಿಐ ತನಿಖೆ ನಡೆಸುವಂತೆ ಪಟ್ಟು ಹಿಡಿದರು.
ಸರ್ಕಾರಿ ಮುಖ್ಯ ಸಚೇತರ ಸಲೀಂ ಮಹಮದ್ ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪ್ರಶ್ನೋತ್ತರ ಕೈಗೆತ್ತಿಕೊಳ್ಳಿ ಎಂದು ಮನವಿ ಮಾಡಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಭಟನೆ ಬಿಟ್ಟು ಕಲಾಪ ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಿ ಎಂದರು.
ಆಗ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸಪೂಜಾರಿ ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯುವುದಾಗಿ ಹೇಳಿ ವಾಪಸ್ ಪಡೆದರು.