ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗ,ಜು.೧೨: ಜೈನ ಮುನಿಗಳ ಹತ್ಯೆ ಖಂಡಿಸಿ ನಗರದ ಜೈನ ಸಮುದಾಯದ ಒಕ್ಕೂಟದವರು ನಗರದಲ್ಲಿ ಇಂದು ಮೌನ ಪ್ರತಿಭಟನೆಯನ್ನು ನಡೆಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿರುವ ಜೈನ ಮಂದಿರದ ಆಚಾರ್ಯ ಶ್ರೀ ೧೦೮ ಕಾಮ ಕುಮಾರನಂದಿ ಮುನಿ ಮಹಾರಾಜರನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿ, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಖಂಡನಿಯ. ಇಂತಹ ಕೃತ್ಯವನ್ನು ಸಕಲ ಜೈನ ಸಮಾಜ, ಜೈನ ಮಠಗಳು ಮತ್ತು ಎಲ್ಲಾ ಮಠಾಧೀಶರು ಖಂಡಿಸಿದರು.
ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆಯಿಂದ ಹಂತಕರನ್ನು ಬಂಧಿಸಿ, ಕಾನೂನಾತ್ಮಕವಾದಂತಹ ಕಾರ್ಯಚರಣೆಯನ್ನು ಮುಂದುವರೆಸಿದ್ದಾರೆ. ಆದರೆ, ಸಂವಿಧಾನ ಹಂತಕರಿಗೆ ಅತ್ಯಂತ ಕಠಿಣ ಮತ್ತು ಅತ್ಯಧಿಕ ಶಿಕ್ಷೆಯನ್ನು ವಿಧಿಸಬೇಕು. ಯಾವುದೇ ರೀತಿಯಾದಂತಹ ಕರುಣೆಯನ್ನು ತೋರಬಾರದು ಎಂದು ಚಿತ್ರದುರ್ಗ ತಾಲ್ಲೂಕು ಜೈನ ಸಮುದಾಯ ಅಸಂಘಟಿತ ವಲಯದವರು ಆಗ್ರಹಿಸಿದರು.
“ಮುನಿ ಹತ್ಯಾ ದೋಷ ಮಹಾ ಪಾಪವಾಗುರುತ್ತದೆ” ಯಾವ ರೀತಿಯಾಗಿ ದಯವೇ ಮೂಲ ಧರ್ಮವೆಂದು ಲೋಕದ ಎಲ್ಲಾ ಜೀವಿಗಳಲ್ಲಿಯೂ ಸಮತಾ ಭಾವನೆಯನ್ನು ಹೊಂದಿದ ಭಗವಾನ್ ಶ್ರೀ ಮಹಾವೀರಸ್ವಾಮಿಯ ಮೂಲ ಸಂದೇಶವಾದ ಬದುಕು-ಬದುಕಲು ಬಿಡು, ಮತ್ತು ಜೀವಿಗೆ ಜೀವಿಯೇ ನೆರವು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಜೈನ ಧರ್ಮಮದ ಅನುಯಾಯಿಗಳು, ಅದರಲ್ಲಿಯೂ ಧರ್ಮಪ್ರವರ್ತಕರಾಗಿ ಆಧ್ಯಾತ್ಮ, ಪ್ರವರ್ತಕರಾಗಿ, ಶಾಂತಿ ಪ್ರಿಯರಾಗಿ ಅಹಿಂಸೆಯನ್ನು ಪ್ರತಿಪಾದನೆ ಮಾಡುವಂತಹ ಜೈನ ಮುನಿಗಳಿಗೆ ಆಗಿರುವ ಈ ಅಹಿತಕರ ಘಟನೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಹಿಂಸಾತ್ಮಕ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಸಕಲ ಜೈನ ಸಮಾಜಕ್ಕೆ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.