ಜೈನ ಮುನಿಗಳ ಹಂತಕರಿಗೆ ಗಲ್ಲು ಶಿಕ್ಷೆಯಾಗಲಿ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು11: ಅಂಹಿಸಾ ತತ್ವದಲ್ಲಿ ನಂಬಿಕೆ ಇಟ್ಟಿರುವ ಜೈನ ಸಮಾಜದ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರನ್ನು ಅಮಾನುಷವಾಗಿ ಕೊಲೆ ಮಾಡಿರುವುದು ಖಂಡನೀಯ, ಜೈನ ಮುನಿಗಳ ಕೊಲೆಗಡುಕರಿಗೆ ಗಲ್ಲು ಶಿಕ್ಷಯಾಗಬೇಕು ಎಂದು ಲಕ್ಷ್ಮೇಶ್ವರ ತಾಲೂಕಾ ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಮನಗೌಡ ಪಾಟೀಲ ಆಗ್ರಹಿಸಿದರು.
ಪಟ್ಟಣದ ಜೈನ ಸಮಾಜದವತಿಯಿಂದ ಶಂಕ ಬಸದಿಯಿಂದ ಪಾದಯಾತ್ರೆಯ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿ ಉಪತಹಸೀಲ್ದಾರ ನಟರಾಜ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಗಿ ಗ್ರಾಮದಲ್ಲಿನ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರನ್ನು ಚಿತ್ರ ಹಿಂಸೆ ನೀಡಿ ಭೀಕರವಾಗಿ ಕೊಲೆ ಮಾಡಿರುವುದು ಜೈನ ಧರ್ಮದ ಮೇಲೆ ಮಾಡಿರುವ ಗದಾ ಪ್ರಹಾರವಾಗಿದೆ. ಅಹಿಂಸಾ ಪರ ಧರ್ಮ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿರುವ ಹಾಗೂ ಅದರಂತೆ ನಡೆದುಕೊಳ್ಳುತ್ತಿರುವ ಜೈನ ಸಮಾಜದ ಧರ್ಮಗುರುಗಳನ್ನು ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು, ಜೈನ ಸಮಾಜದ ಮುನಿಗಳಿಗೆ ಹಾಗೂ ಜೈನ ಮಂದಿರಗಳಿಗೆ ಸೂಕ್ತ ಬಂದೋಬಸ್ತ ನೀಡುವ ಮೂಲಕ ಸಮಾಜದ ಗುರುಗಳಿಗೆ ರಕ್ಷಣೆ ನೀಡುವ ಕಾರ್ಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಬೇಕು. ಅಲ್ಲದೆ ಸೂಕ್ತ ತನಿಖೆ ಮಾಡುವ ಮೂಲಕ ಜೈನ ಸಮಾಜಕ್ಕೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಈ ವೇಳೆ ಒಡೆಯರ ಮಲ್ಲಾಪುರ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ, ಮಹಾವೀರ ಪಾಟೀಲ ಮಾತನಾಡಿದರು.
ಮೌನಪ್ರತಿಭಟನೆಯಲ್ಲಿ ವಿನಯ ಪಾಟೀಲ, ಪ್ರಕಾಶ ಪಾಟೀಲ, ಧ್ನುಕುಮಾರ ಮುತ್ತಿನ, ನೇಮಿನಾಥ ಪಾಟೀಲ, ಸಂತೋಷ ಬರಗಾಲಿ, ಆರ್.ಸಿ.ಪಾಟೀಲ, ಶಾಂತಾ ಪಾಟೀಲ, ಯಶೋಧರ ಬರಿಗಾಲಿ, ಲೀಲಾವತಿ ಪಾಟೀಲ, ಅಪ್ಪು ಗೋಗಿ, ಚೇತನ ಪಾಟೀಲ, ಪ್ರಕಾಶ ಬರಿಗಾಲಿ ಸೇರಿದಂತೆ ಅನೇಕರು ಇದ್ದರು.