ಜೈನ್ ಸಮುದಾಯಕ್ಕೆ ಹೃದ್ರೋಗ ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.02: ನಗರದ ಹೃದ್ರೋಗ ತಜ್ಞ ಡಾ. ಬಿ.ಕೆ ಸುಂದರ್ ಅವರು ಗುರು ಜ್ಯೇಷ್ಠ ಪುಷ್ಕರ ನರೇಶ್ ದರಬಾರಕ್ಕೆ ಆಗಮಿಸಿ ಗುರುಗಳ ಮುಖವಾಣಿಯಿಂದ ಜಿವವಾಣಿ ಆಲಿಸಿ ಆಶೀರ್ವಾದ ಪಡೆದರು. ನಂತರ ಅವರು ಇಂದಿನ ಆಧುನಿಕ ಜೀವನಶೈಲಿಯಲ್ಲಿ ಹೇಗೆ ಫಿಟ್ ಆಗಿರಬೇಕು, ದಿನನಿತ್ಯದ ಆಹಾರವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ವ್ಯಾಯಾಮದ ಪ್ರಯೋಜನಗಳೇನು ಎಂಬುದನ್ನು ತಿಳಿಸಿದರು.
ಹೃದಯಾಘಾತಕ್ಜೆ ಒಳಗಾದಾಗ ವ್ಯಕ್ತಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಡಾ. ಸುಂದರ್ ಅವರು ಡಾ. ನಿತೇಶ್ ಮತ್ತು ಡಾ.ಮನೋಹರ್ ಅವರೊಂದಿಗೆ ತಿಳಿಸಿದರು. ಹೃದಯಾಘಾತದ ಸಂದರ್ಭದಲ್ಲಿ ಹತ್ತಿರದ ವೈದ್ಯಕೀಯ ಸೌಲಭ್ಯ ಲಭ್ಯವಾಗುವವರೆಗೆ ಸಾಮಾನ್ಯ ಜನರು ಸಿಪಿಆರ್ ನಿಂದ ಆ ವ್ಯಕ್ತಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರು ಪುಷ್ಕರ ಜೈನ ಸೇವಾ ಸಮಿತಿಯು ಅಸ್ವಸ್ಥರ ಅನುಕೂಲಕ್ಕಾಗಿ ಬಿಕೆಎಸ್ ಆಸ್ಪತ್ರೆಗೆ ಗಾಲಿಕುರ್ಚಿಯನ್ನು ನೀಡಿತು.
ಕಾರ್ಯಕ್ರಮವನ್ನು ಶ್ರೀ ಗುರು ಪುಷ್ಕರ ಜೈನ ಸೇವಾ ಸಮಿತಿ ಆಯೋಜಿಸಿತ್ತು. ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಮೆಹ್ತಾ ಇದ್ದರು. ಸಭೆಯಲ್ಲಿ ಡಾ. ಡಿ.ಎಂ. ಕಟಾರಿಯಾ, ಡಾ. ಮನೋಹರ್ ಮೆಹ್ತಾ ಮತ್ತು ಡಾ. ನಿತೇಶ್ ಕಟಾರಿಯಾ ಉಪಸ್ಥಿತರಿದ್ದರು