ಜೈನಾಪುರ ಬಾಲಕಿ ಸಾವು ಪ್ರಕರಣ: 24 ಗಂಟೆಯೊಳಗೆ ಜೇವರ್ಗಿ ಪಿಎಸ್‍ಐ ತಲೆದಂಡ

ಕಲಬುರಗಿ,ಜ.5: 24 ಗಂಟೆಯೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಭರವಸೆ ನೀಡಿದ ಬೆನ್ನಲ್ಲೇ ಜೇವರ್ಗಿ ಪೋಲಿಸ್ ಠಾಣೆಯ ಪಿಎಸ್‍ಐ ಮಂಜುನಾಥ್ ಹೂಗಾರ್ ಅವರ ತಲೆದಂಡವಾಗಿದೆ.
ಜೈಲಿನಲ್ಲಿ ಜೈನಾಪುರದ ಮೂರು ವರ್ಷದ ಬಾಲಕಿ ಭಾರತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಮಂಜುನಾಥ್ ಹೂಗಾರ್ ಅವರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕರಿ ಸಿಮಿ ಮರಿಯಮ್ ಜಾರ್ಜ್ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಂಚಾಯಿತಿ ಚುನಾವಣೆಯ ನಂತರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ಗೆದ್ದ ಅಭ್ಯರ್ಥಿ ಹಾಗೂ ಸೋತ ಅಭ್ಯರ್ಥಿ ಮಧ್ಯೆ ಗಲಾಟೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಎಂಬಾತನಿಗೆ ಸೇರಿ ಆತನ ಕುಟುಂಬದ ಏಳು ಜನರನ್ನು ಪೋಲಿಸರು ಬಂಧಿಸಿ ಮಕ್ಕಳ ಸಮೇತ ಜೈಲಿಗೆ ಕಳಿಸಿದ್ದರು. ಈ ವೇಳೆ ಮೂರು ವರ್ಷದ ಬಾಲಕಿ ಭಾರತಿ ಸಾವನ್ನಪ್ಪಿದ್ದಳು.
ಬಾಲಕಿ ಸಾವಿಗೆ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಹೂಗಾರ್ ಕಾರಣ. ವಿಚಾರಣೆ ನೆಪದಲ್ಲಿ ವಿನಾಕಾರಣ ಕುಟುಂಬದ ಸದಸ್ಯರನ್ನು ಠಾಣೆಗೆ ತಂದು ಕಿರುಕುಳ ನೀಡಿ ಜೈಲಿಗೆ ಕಳಿಸಿದ್ದಾರೆ. ಇದರಿಂದ ಆಘಾತಗೊಂಡ ಬಾಲಕಿಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿ ಬಾಲಕಿಯ ಮೃತದೇಹದ ಸಮೇತ ಭಾನುವಾರ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದರು.
ಶಾಸಕರು ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಂಗ್ ಅವರೂ ಸೇರಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಹೂಗಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತನಿಖೆ ಕೈಗೊಂಡು 24 ಗಂಟೆಗಳಲ್ಲಿಯೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 11.45ಕ್ಕೆ ಹೋರಾಟ ಕೈಬಿಡಲಾಗಿತ್ತು. ಇದೀಗ 24 ಗಂಟೆಯೊಳಗಾಗಿ ಪಿಎಸ್‍ಐ ಮಂಜುನಾಥ್ ಹೂಗಾರ್ ತಲೆದಂಡವಾಗಿದೆ. ಹೂಗಾರ್ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.